×
Ad

ವಿದ್ಯಾರ್ಥಿಯ ಕೆನ್ನೆಗೆ ಸಹಪಾಠಿಗಳು ಹೊಡೆದ ಘಟನೆಗೆ ಉತ್ತರಪ್ರದೇಶ ಸರಕಾರವೇ ಹೊಣೆ: ಸುಪ್ರೀಂ ಕೋರ್ಟ್

Update: 2024-01-12 20:57 IST

Photo: Indiatoday.com

ಹೊಸದಿಲ್ಲಿ: ಉತ್ತರಪ್ರದೇಶದ ಮುಝಫ್ಫರ್ನಗರದ ಖಾಸಗಿ ಶಾಲೆಯೊಂದರಲ್ಲಿ ಏಳು ವರ್ಷದ ಮುಸ್ಲಿಮ್ ವಿದ್ಯಾರ್ಥಿಯೋರ್ವನ ಕೆನ್ನೆಗೆ ಹೊಡೆಯುವಂತೆ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿಗಳಿಗೆ ಸೂಚನೆ ನೀಡಿರುವ ಘಟನೆಗೆ ರಾಜ್ಯ ಸರಕಾರವೇ ಹೊಣೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

‘‘ತಾನು ಏನು ಮಾಡಬೇಕಾಗಿತ್ತೋ ಅದನ್ನು ರಾಜ್ಯ ಸರಕಾರವು ಮಾಡಲಿಲ್ಲ. ಹಾಗಾಗಿಯೇ ಈ ಘಟನೆ ಸಂಭವಿಸಿದೆ. ಈ ಘಟನೆ ನಡೆದಿರುವುದಕ್ಕೆ ರಾಜ್ಯ ಸರಕಾರ ಕಳವಳಗೊಳ್ಳಬೇಕು’’ ಎಂದು ನ್ಯಾ. ಎ.ಎಸ್. ಓಕ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವೊಂದು ಅಭಿಪ್ರಾಯಪಟ್ಟಿತು.

‘‘ಆದರೆ, ಅದು ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ’’ ಎಂದು ರಾಜ್ಯ ಸರಕಾರದ ವಕೀಲರು ಹೇಳಿದರು.

ಪೆಟ್ಟು ತಿಂದ ಮಗು ಮತ್ತು ಆ ಮಗುವಿನ ಸಹಪಾಠಿಗಳಿಗೆ ಕೌನ್ಸೆಲಿಂಗ್ ಮಾಡುವಂತೆ ಸುಪ್ರೀಂ ಕೋರ್ಟ್ ನವೆಂಬರ್ನಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಪ್ ಸೋಶಿಯಲ್ ಸಯನ್ಸಸ್ (ಟಿಐಎಸ್ಎಸ್)ನ ಪರಿಣತರಿಗೆ ಸೂಚಿಸಿತ್ತು. ಗ್ರಾಮೀಣ ಉತ್ತರಪ್ರದೇಶದಲ್ಲಿ ಕಳಪೆ ದರ್ಜೆಯ ಶಾಲಾ ವ್ಯವಸ್ಥೆ ಇರುವುದನ್ನು ವಿದ್ಯಾರ್ಥಿಯ ಕೆನ್ನೆಗೆ ಹೊಡೆದ ಘಟನೆಯು ತೋರಿಸುತ್ತದೆ ಎಂದು ಅದು ಹೇಳಿತ್ತು.

ಸಾಮಾಜಿಕ ಕಾರ್ಯಕರ್ತ ತುಷಾರ್ ಗಾಂಧಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ, ಟಿಐಎಸ್ಎಸ್ ನ ಶಿಫಾರಸುಗಳನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಬಾಲಕನ ಹೆತ್ತವರೊಂದಿಗೆ ಚರ್ಚಿಸಿ ಹೆಚ್ಚಿನ ಸಲಹೆಗಳನ್ನು ನೀಡುವಂತೆ ನ್ಯಾಯಾಲಯವು ಅರ್ಜಿದಾರರ ವಕೀಲ ಶಾದನ್ ಫರಾಸತ್ ಗೆ ಸೂಚಿಸಿತು. ಆದರೆ ಟಿಐಎಸ್ಎಸ್ ಶಿಫಾರಸುಗಳು ಅಪರಿಪೂರ್ಣವಾಗಿವೆ ಎಂದು ಫರಾಸತ್ ತಿಳಿಸಿದರು.

ಘಟನೆ ಕಳೆದ ವರ್ಷದ ಆಗಸ್ಟ್ ನಲ್ಲಿ ನಡೆದಿತ್ತು. ಶಿಕ್ಷಕಿ ತೃಪ್ತಾ ತ್ಯಾಗಿ ಮುಸ್ಲಿಮ್ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ವೈರಲ್ ಆಗಿರುವ ವೀಡಿಯೊದಲ್ಲಿ ದಾಖಲಾಗಿದೆ. ನೀವು ಯಾಕೆ ಈ ಮುಸ್ಲಿಮನಿಗೆ ಹೊಡೆಯುವುದಿಲ್ಲ ಎಂದು ಶಿಕ್ಷಕಿ ಶಾಲೆಯ ಇತರ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಕೇಳುತ್ತದೆ. ಆ ಬಳಿಕ ವಿದ್ಯಾರ್ಥಿಗಳು ಸಾಲಿನಲ್ಲಿ ಬಂದು ಮುಸ್ಲಿಮ್ ವಿದ್ಯಾರ್ಥಿಗೆ ಹೊಡೆಯುವುದನ್ನು ವೀಡಿಯೊ ತೋರಿಸುತ್ತದೆ. ಬಾಲಕ ಬೆದರಿ ಅಳುವುದು ಕಾಣುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News