×
Ad

ಉತ್ತರ ಪ್ರದೇಶ |ನಾಯಿ ಮರಿ ಕಚ್ಚಿದ್ದನ್ನು ನಿರ್ಲಕ್ಷಿಸಿದ ಕಬಡ್ಡಿ ಪಟು ರೇಬೀಸ್ ಗೆ ಬಲಿ!

Update: 2025-07-02 19:03 IST

PC : X 

ಮೀರತ್: ಸುಮಾರು ಎರಡು ತಿಂಗಳ ಹಿಂದೆ ಕಾಲುವೆಯಿಂದ ಬೀದಿ ನಾಯಿ ಮರಿಯೊಂದನ್ನು ರಕ್ಷಿಸುವಾಗ, ಸಣ್ಣ ಪ್ರಮಾಣದ ನಾಯಿ ಕಡಿತಕ್ಕೆ ಗುರಿಯಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಪಟುವೊಬ್ಬರು, ನಂತರ ಬುಲಂದ್ ಶಹರ್ ಬಳಿ ರೇಬೀಸ್ ಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಗಳಲ್ಲಿ ಚಿನ್ನದ ಪದಕ ವಿಜೇತ ಹಾಗೂ ಪ್ರೊ ಕಬಡ್ಡಿ ಲೀಗ್ ಕ್ರೀಡಾಟಕೂಟದಲ್ಲಿ ಸ್ಥಾನ ಪಡೆಯುವ ಆಕಾಂಕ್ಷೆ ಹೊಂದಿದ್ದ 22 ವರ್ಷದ ಕಬಡ್ಡಿ ಪಟುವಾದ ಬೃಜೇಶ್ ಸೋಲಂಕಿ, ನಾಯಿ ಮರಿಯ ಕಡಿತದ ನಂತರ ರೇಬೀಸ್ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ, ಅವರು ಮೃತಪಡುವುದಕ್ಕೂ ಕೆಲವೇ ದಿನಗಳ ಮುನ್ನ ಅವರಲ್ಲಿ ರೇಬೀಸ್ ರೋಗ ಲಕ್ಷಣಗಳು ಕಂಡು ಬಂದಿದ್ದವು ಎನ್ನಲಾಗಿದೆ.

ಬೃಜೇಶ್ ಸೋಲಂಕಿಯ ಕ್ಷೀಣಿಸುತ್ತಿರುವ ದೇಹಾರೋಗ್ಯದ ವೀಡಿಯೊಗಳು ರವಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಮರುದಿನವೇ ಅವರು ಮೃತಪಟ್ಟಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಬೃಜೇಶ್ ಸೋಲಂಕಿಯ ತರಬೇತುದಾರ ಪ್ರವೀಣ್ ಕುಮಾರ್, “ಬೃಜೇಶ್ ತನ್ನ ಕೈಯಲ್ಲಿ ಕಂಡು ಬಂದ ನೋವನ್ನು ನಿಯಮಿತವಾಗಿ ಕಬಡ್ಡಿ ಆಡುವಾಗಿನ ಗಾಯ ಎಂದು ತಪ್ಪಾಗಿ ಅರ್ಥೈಸಿಕೊಂಡರು. ನಾಯಿ ಕಡಿತ ಸಣ್ಣ ಪ್ರಮಾಣದಲ್ಲಿದ್ದಂತೆ ಕಂಡು ಬಂದಿದ್ದರಿಂದ, ಆತ ಅದನ್ನು ಗಂಭೀರವಾಗಿ ಪರಿಗಣಿಸದೆ ಲಸಿಕೆಯನ್ನು ತೆಗೆದುಕೊಂಡಿರಲಿಲ್ಲ” ಎಂದು ತಿಳಿಸಿದ್ದಾರೆ.

ಜೂನ್ 26ರಂದು ಕಬಡ್ಡಿ ಅಭ್ಯಾಸದ ವೇಳೆ ಬೃಜೇಶ್ ಸೋಲಂಕಿಗೆ ಜೋಮು ಹಿಡಿದ ಅನುಭವವಾಗಿದೆ. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ, ನಂತರ ಅವರನ್ನು ನೊಯ್ಡಾದಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಬೃಜೇಶ್ ಸೋಲಂಕಿಯನ್ನು ಮಥುರಾದಲ್ಲಿನ ಧಾರ್ಮಿಕ ಗುರುವೊಬ್ಬರ ಬಳಿಗೆ ಕರೆದೊಯ್ಯುವಾಗ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬೃಜೇಶ್ ಸೋಲಂಕಿಯ ಸಹೋದರ ಸಂದೀಪ್ ಕುಮಾರ್, “ದಿಢೀರನೆ ಆತ ನೀರನ್ನು ಕಂಡರೆ ಭಯಪಡತೊಡಗಿದ ಹಾಗೂ ರೇಬೀಸ್ ರೋಗ ಲಕ್ಷಣಗಳನ್ನು ಪ್ರದರ್ಶಿಸತೊಡಗಿದ. ಹೀಗಿದ್ದೂ, ಖುರ್ಜಾ, ಆಲಿಗಢ ಹಾಗೂ ದಿಲ್ಲಿ ಸೇರಿದಂತೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಆತನಿಗೆ ಚಿಕಿತ್ಸೆ ನಿರಾಕರಿಸಲಾಯಿತು” ಎಂದು ಅಳಲು ತೋಡಿಕೊಂಡಿದ್ದಾರೆ.

ನೊಯ್ಡಾದಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮಾತ್ರ ಬೃಜೇಶ್ ಸೋಲಂಕಿ ರೇಬೀಸ್ ಸೋಂಕಿಗೆ ಗುರಿಯಾಗಿರುವ ಸಾಧ್ಯತೆಯನ್ನು ದೃಢಪಡಿಸಿದ್ದಾರೆ. ತಮ್ಮ ಕುಟುಂಬದ ಮೂವರು ಸಹೋದರರ ಪೈಕಿ ಅತ್ಯಂತ ಕಿರಿಯವರಾದ ಬೃಜೇಶ್ ಸೋಲಂಕಿ, ಫರಾನಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ದಿಢೀರ್ ಸಾವಿನಿಂದಾಗಿ ಸೋಮವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ 29 ಮಂದಿ ಗ್ರಾಮಸ್ಥರಿಗೆ ಲಸಿಕೆ ನೀಡಿದ ಆರೋಗ್ಯ ಇಲಾಖೆ, ರೇಬೀಸ್ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News