×
Ad

ಉತ್ತರಪ್ರದೇಶ: ಚೌರಿ ಚೌರಾ ದುರಂತದಲ್ಲಿ ಮಡಿದ 22 ಪೊಲೀಸರಿಗೆ ಇನ್ನು ಮುಂದೆ ಗೌರವ ಸಮರ್ಪಣೆ ಇಲ್ಲ

Update: 2023-08-15 08:29 IST

Chauri Chaura Incident

ಲಕ್ನೋ: ಚೌರಿ ಚೌರಾದಲ್ಲಿ 1922ರಂದು ಮಡಿದ 22 ಪೊಲೀಸರಿಗೆ ಪ್ರತಿ ವರ್ಷದ ಸ್ವಾತಂತ್ರ್ಯ ದಿನದಂದು ಗೌರವ ಸಮರ್ಪಿಸುವ ಸಂಪ್ರದಾಯಕ್ಕೆ ಉತ್ತರ ಪ್ರದೇಶ ಸರ್ಕಾರ ತಿಲಾಂಜಲಿ ನೀಡಿದೆ. ಗೋರಖ್ಪುರ ಪಟ್ಟಣದಲ್ಲಿ ಪ್ರತಿ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಏರ್ಪಡಿಸುತ್ತಿದ್ದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಕೈಬಿಡಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

"1922ರ ಫೆಬ್ರುವರಿ 4ರಂದು ಉದ್ರಿಕ್ತ ಜನರು ಚೌರಿ ಚೌರಾ ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಘಟನೆಯಲ್ಲಿ ಮೃತಪಟ್ಟ ಪೊಲೀಸರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಪೊಲೀಸರು ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರದ ಉದ್ಯೋಗಿಗಳು ಎನ್ನುವುದನ್ನು ಪರಿಗಣಿಸಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ" ಎಂದು ಎಸ್ಪಿ ಮನೋಜ್ ಕುಮಾರ್ ಅವಸ್ತಿ ಹೇಳಿದ್ದಾರೆ.

"ಈ ಬದಲಾವಣೆ 76ನೇ ಸ್ವಾತಂತ್ರ್ಯ ದಿನಾಚರಣೆಯಿಂದ ಅಂದರೆ ಈ ಬಾರಿಯ ಸ್ವಾತಂತ್ರ್ಯೋತ್ಸವದಿಂದ ಜಾರಿಗೆ ಬರಲಿದೆ. ಇದರ ಬದಲಾಗಿ ಆ ದಿನ ಅಸಹಕಾರ ಚಳವಳಿಯ ಹೋರಾಟದ ಸಂದರ್ಭ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಮೃತಪಟ್ಟ ಮೂವರು ನಾಗರಿಕರಿಗೆ ಗೌರವ ಸಮರ್ಪಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಕಳೆದ ವರ್ಷ ನಡೆದ ಅಸಹಕಾರ ಚಳವಳಿಯ ಶತಮಾನೋತ್ಸವ ಸಮಾರಂಭದ ವೇಳೆ ಈ ವಿಷಯ ಪ್ರಸ್ತಾಪವಾಗಿತ್ತು. ಆಗ ವಿಭಾಗೀಯ ಆಯುಕ್ತ ರವಿ ಕುಮಾರ್ ಎಂ.ಜಿ. ಅವರ ನೇತೃತ್ವದ ಸಂಘಟನಾ ಸಮಿತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಪೊಲೀಸರನ್ನು ಗೌರವಿಸುವ ಸಂಪ್ರದಾಯ ನಿಲ್ಲಿಸುವಂತೆ ಮನವಿ ಮಾಡಿತ್ತು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ವರ್ಷದಿಂದ ಅದನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News