ಉತ್ತರಪ್ರದೇಶ: ದಲಿತರ ಬುದ್ಧ ಕಾರ್ಯಕ್ರಮಕ್ಕೆ ಗುಂಡಿನ ದಾಳಿ
ಲಕ್ನೊ: ಕಾನ್ಪುರದಲ್ಲಿ ದಲಿತ ಸಮುದಾಯ ಆಯೋಜಿಸಿದ್ದ ‘‘ಬೌದ್ಧ ಕಥಾ’’ ಕಾರ್ಯಕ್ರಮಕ್ಕೆ ಮಂಗಳವಾರ ಮುಂಜಾನೆ 2 ಗಂಟೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ದಾಂಧಲೆ ನಡೆಸಿದೆ ಹಾಗೂ ಕಿಚ್ಚಿರಿಸಿದೆ.
ಘಟನೆಗೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು 16 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಐವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.
ಕಾನ್ಪುರದ ಪಹೇವಾ ಗ್ರಾಮದಲ್ಲಿ 9 ದಿನಗಳ ಬುದ್ಧ ಧಮ್ಮ ಹಾಗೂ ಅಂಬೇಡ್ಕರ್ ಜ್ಞಾನದ ಕುರಿತು ಚರ್ಚೆ ಡಿಸೆಂಬರ್ 15ರಂದು ಆರಂಭವಾಗಿದೆ. ನಾಲ್ಕನೇ ದಿನದ ಕಾರ್ಯಕ್ರಮಕ್ಕೆ ದುಷ್ಕರ್ಮಿಗಳು ಹಲವು ಕಾರುಗಳಲ್ಲಿ ಆಗಮಿಸಿ ದಾಂಧಲೆ ನಡೆಸಿದ್ದಾರೆ. ಈ ಸಂದರ್ಭ ಅಲ್ಲಿ ನಿದ್ರಿಸುತ್ತಿದ್ದ ಪಿಂಟು ಕುಶ್ವಾಹ ಪ್ರತಿರೋಧ ವ್ಯಕ್ತಪಡಿಸಿದರು. ಅವರಿಗೆ ದುಷ್ಕರ್ಮಿಗಳು ಥಳಿಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳು ಡೇರೆಯ ಪರದೆ ಹರಿದಿದ್ದಾರೆ, ಕುರ್ಚಿಗಳನ್ನು ಮುರಿದಿದ್ದಾರೆ ಹಾಗೂ ಅಂಬೇಡ್ಕರ್, ಬುದ್ಧನ ಚಿತ್ರಗಳನ್ನು ಹರಿದಿದ್ದಾರೆ. ಈ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ಸಂತ ರವಿದಾಸರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಅನಂತರ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಘಟನೆ ನಡೆದ ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹೆಚ್ಚುವರಿ ಡಿಸಿಪಿ ಅಂಕಿತಾ ಶರ್ಮಾ, ಘಟನೆಗೆ ಸಂಬಂಧಿಸಿ 16 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.