ಉತ್ತರ ಪ್ರದೇಶ : ಸೂಫಿ ಸಮಾಧಿ ಭೂ ವಿವಾದ, ಸಾಮಾಜಿಕ ಮಧ್ಯಮದಲ್ಲಿ ಪೋಸ್ಟ್ ಹಾಕಿದ ಮೂವರ ಬಂಧನ
ಲಕ್ನೋ: ಬಾಗಾಪತ್ ಜಿಲ್ಲೆಯ ಬರನಾವಾ ಪಟ್ಟಣದಲ್ಲಿ ಸ್ಥಳೀಯ ಎರಡು ಸಮುದಾಯಗಳ ನಡುವಿನ ಭೂ ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಮಾದ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಉತ್ತರಪ್ರದೇಶ ಪೊಲೀಸರು ಬುಧವಾರ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬರನಾವಾದ ನಿವಾಸಿಗಳಾದ ಅಬ್ರಾರ್, ಆಸಿಫ್ ಹಾಗೂ ಸಾಕಿಬ್ (ಎಲ್ಲರ ವಯಸ್ಸು 20) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬರನಾವಾದಲ್ಲಿರುವ 25 ಹೆಕ್ಟೇರ್ ಭೂಮಿಗೆ ಸಂಬಂಧಿಸಿದ 53 ವರ್ಷಗಳ ಹಿಂದಿನ ಮೊಕದ್ದಮೆ ಕುರಿತಂತೆ ಬಾಗಾಪತ್ ನ್ಯಾಯಾಲಯ ಫೆಬ್ರವರಿ 5ರಂದು ತೀರ್ಪು ನೀಡಿತ್ತು ಹಾಗೂ ಭೂಮಿಯನ್ನು ಹಿಂದೂ ದೂರುದಾರರಿಗೆ ಹಸ್ತಾಂತರಿಸಿತ್ತು.
ಹಿಂದೂ ದೂರುದಾರರು ಈ ಭೂಮಿ ಹಿಂದೂ ಮಹಾಕಾವ್ಯದ ಒಂದು ಪ್ರಸಂಗದ ಸ್ಥಳವಾಗಿದೆ ಎಂದು ಪ್ರತಿಪಾದಿಸಿದ್ದರು. ಮುಸ್ಲಿಂ ದೂರುದಾರರು, ಸೂಫಿಗಳ ಸಮಾಧಿ ಹಾಗೂ ಸ್ಮಶಾನ ಇರುವ ಸ್ಥಳವನ್ನು ಸ್ಥಳೀಯ ಹಿಂದುಗಳು ಅತಿಕ್ರಮಣ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದರು.
ನ್ಯಾಯಾಲಯದ ಆದೇಶದ ಬಳಿಕ ಈ ಮೂವರು ಫೇಸ್ ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕಿದ್ದರು ಎಂದು ಬಿನೌಲಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎಫ್ಐಆರ್ ನಲ್ಲಿ ಪೊಲೀಸ್ ಕೂಡ ದೂರುದಾರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಂಧಿತರ ಕುರಿತು ವಿಚಾರಿಸಲು ಬಾಗಾಪತ್ ಜಿಲ್ಲಾ ಪಂಚಾಯತ್ ಸದಸ್ಯ ಮೆಹಬೂಬಾ ಅಲ್ವಿ ಬರನಾವಾ ಪೊಲೀಸ್ ಚೌಕಿಗೆ ಬುಧವಾರ ಭೇಟಿ ನೀಡಿದ್ದರು. ಮುಸ್ಲಿಮರು ಮೊದಲು ಅಯೋಧ್ಯೆಯಲ್ಲಿ ಬಾಬರಿ ಮಸೀದಿ, ಅನಂತರ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿ, ಈಗ ಬರವಾನಾದಲ್ಲಿರುವ ಸೂಫಿ ಸಮಾಧಿಯನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯ ಎಚ್ಚೆತ್ತುಕೊಳ್ಳುವುದು ಯಾವಾಗ? ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್ ಪ್ರಶ್ನಿಸಿದೆ ಎಂದು ನಗರದ ಸಾಮಾಜಿಕ ಕಾರ್ಯಕರ್ತ ಅಕ್ಬರ್ ಖಾನ್ ಹೇಳಿದ್ದಾರೆ. ಆದರೆ, ‘‘ನಾವಿಬ್ಬರು ಫೇಸ್ಬುಕ್ ಪೋಸ್ಟ್ ಅನ್ನು ನೋಡಿಲ್ಲ’’ ಎಂದು ಅಲ್ವಿ ಹಾಗೂ ಖಾನ್ ತಿಳಿಸಿದ್ದಾರೆ.