ಉತ್ತರಪ್ರದೇಶ: ರೈಲು ಢಿಕ್ಕಿಯಾಗಿ ಇಬ್ಬರು ರೈಲ್ವೆ ನೌಕರರು ಸಾವು
Photo: PTI
ಲಕ್ನೊ: ಬಾರಾಬಂಕಿಯ ಜಹಾಂಗೀರ್ಬಾದ್ ರೈಲ್ವೆ ನಿಲ್ದಾಣದ ಸಮೀಪದ ದೋಷಪೂರಿತ ಸಿಗ್ನಲ್ ದುರಸ್ಥಿಯ ಸಂದರ್ಭ ಬಂದ ರೈಲು ಢಿಕ್ಕಿಯಾಗಿ ಇಬ್ಬರು ರೈಲ್ವೆ ನೌಕರರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗೋಂಡಾ-ಬಾರಾಬಂಕಿ ರೈಲ್ವೆ ವಿಭಾಗದ ಸಮೀಪ ಗುರುವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಒಂದು ಸಿಗ್ನಲ್ ಕಂಬದಲ್ಲಿರುವ ದೋಷವನ್ನು ಅರವಿಂದ ಕುಮಾರ್, ತಲಾ ಸೋರೆನ್ ಆಲಿಯಾಸ್ ಕಲ್ಲು (45) ಹಾಗೂ ದೇವಿಪ್ರಸಾದ್ (30) ದುರಸ್ಥಿಗೊಳಿಸುತ್ತಿದ್ದರು. ಈ ಸಂದರ್ಭ ಕೊಚ್ಚಿನ್ ಎಕ್ಸ್ ಪ್ರೆಸ್ ಹಾಗೂ ಬರೌನಿ ಎಕ್ಸ್ ಪ್ರೆಸ್ ಮೇಲಿನ ಹಾಗೂ ಕೆಳಗಿನ ಹಳಿಯಲ್ಲಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಚ್ಚಿನ ಎಕ್ಸ್ ಪ್ರೆಸ್ ಢಿಕ್ಕಿಯಾಗಿ ಅರವಿಂದ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಸೊರೇನ್ ಅನಂತರ ಸಾವನ್ನಪ್ಪಿದ್ದಾರೆ. ಪ್ರಸಾದ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅರವಿಂದ ಕುಮಾರ್ ಅವರನ್ನು ಜಹಾಂಗೀರ್ಬಾದ್ ರೈಲ್ವೆ ನಿಲ್ದಾಣಕ್ಕೆ ಎಲೆಕ್ಟ್ರೀಷಿಯನ್ ಆಗಿ ಹಾಗೂ ಸೊರೇನ್ ಅವರನ್ನು ಸಿಗ್ನಲ್ ಸಹಾಯಕನನ್ನಾಗಿ ನಿಯೋಜಿಸಲಾಗಿತ್ತು. ಪ್ರಸಾದ್ ರೈಲ್ವೆಯ ಗುತ್ತಿಗೆ ಕಾರ್ಮಿಕನಾಗಿದ್ದ ಎಂದು ಸರಕಾರಿ ರೈಲ್ವೇ ಪೊಲೀಸ್ ಠಾಣೆಯ ಉಸ್ತುವಾರಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ.