×
Ad

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ: ಐವರು ಮೃತ್ಯು,ಹಲವರು ನಾಪತ್ತೆ

Update: 2025-08-29 20:27 IST
PC : PTI 

ಡೆಹ್ರಾಡೂನ್,ಆ.29: ಉತ್ತರಾಖಂಡದ ರುದ್ರಪ್ರಯಾಗ,ಚಮೋಲಿ, ಬಾಗೇಶ್ವರ ಮತ್ತು ತೆಹ್ರಿ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಗುರುವಾರ ತಡರಾತ್ರಿ ಸರಣಿ ಮೇಘಸ್ಫೋಟಗಳಲ್ಲಿ ಐವರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ರುದ್ರಪ್ರಯಾಗ ಜಿಲ್ಲೆಯ ತೆಂಡ್ವಾಲ್ ಗ್ರಾಮದಲ್ಲಿ ಮಹಿಳೆಯೋರ್ವರು ಜೀವಂತ ಸಮಾಧಿಯಾಗಿದ್ದಾರೆ. ಮೇಘಸ್ಫೋಟದ ಬಳಿಕ ಕನಿಷ್ಠ 18 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಚಮೋಲಿ ಜಿಲ್ಲೆಯ ದೇವಲ್‌ ನಲ್ಲಿ ಇಬ್ಬರು ಮೃತಪಟ್ಟಿದ್ದು,ಸುಮಾರು 20 ಜಾನುವಾರುಗಳು ಅವಶೇಷಗಳಡಿ ಹೂತುಹೋಗಿವೆ.

ಶುಕ್ರವಾರ ನಸುಕಿನಲ್ಲಿ ಬಾಗೇಶ್ವರ ಜಿಲ್ಲೆಯ ಪೌಸಾರಿ ಗ್ರಾಮದಲ್ಲಿ ಭೂಕುಸಿತದಿಂದಾಗಿ ಬಂಡೆಗಳು ಮನೆಯೊಂದರ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಗುರುವಾರ ರಾತ್ರಿ ತೆಹ್ರಿ ಜಿಲ್ಲೆಯ ಗೆವಾಲಿ ಗ್ರಾಮದಲ್ಲಿಯೂ ಮೇಘಸ್ಫೋಟ ಸಂಭವಿಸಿದ್ದು,ಯಾವುದೇ ಸಾವುನೋವು ವರದಿಯಾಗಿಲ್ಲ.

ಕಳೆದ ರಾತ್ರಿಯಿಂದ ಉತ್ತರಾಖಂಡದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು,ಅನೇಕ ಕಡೆಗಳಲ್ಲಿ ರಸ್ತೆಗಳಿಗೆ ಹಾನಿಯುಂಟಾಗಿವೆ ಮತ್ತು ಭೂಕುಸಿತಗಳು ಸಂಭವಿಸಿವೆ.

ಪೀಡಿತ ಪ್ರದೇಶಗಳಲ್ಲಿ ಹಲವಾರು ಮನೆಗಳು ಅವಶೇಷಗಳಡಿ ಸಿಲುಕಿದ್ದು,ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

ಹಲವಾರು ಸ್ಥಳಗಳಲ್ಲಿ ಪ್ರವಾಸಿಗಳು ಸಿಕ್ಕಿ ಹಾಕಿಕೊಂಡಿದ್ದು,ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.

ಅಲಕನಂದಾ ನದಿಯು ಉಕ್ಕಿ ಹರಿಯುತ್ತಿದ್ದು ರುದ್ರಪ್ರಯಾಗದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ.

ಕಳೆದ ಕೆಲವು ದಿನಗಳಲ್ಲಿ ಉತ್ತರಾಖಂಡದಲ್ಲಿ ಮೇಘಸ್ಫೋಟದ ಹಲವಾರು ಘಟನೆಗಳು ಸಂಭವಿಸಿವೆ. ಇತ್ತೀಚಿಗೆ ಉತ್ತರಕಾಶಿಯ ಧರಾಲಿಯಲ್ಲಿ ದಿಢೀರ್ ಪ್ರವಾಹದಿಂದಾಗಿ ಏಳು ಜನರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News