ಉತ್ತರಾಖಂಡ : 2 ಕೆಮ್ಮಿನ ಸಿರಫ್ ನಿಷೇಧಿಸಿದ ಸರಕಾರ
Update: 2025-10-06 19:23 IST
ಸಾಂದರ್ಭಿಕ ಚಿತ್ರ | Photo Credit : freepik.com
ಡೆಹ್ರಾಡೂನ್, ಅ. 6: ಉತ್ತರಾಖಂಡ ಸರಕಾರ ಕಾಲ್ಡ್ರೀಫ್ ಹಾಗೂ ಡೆಕ್ಸ್‌ಟ್ರೋಮೆಥೋರ್ಪನ್ ಹೈಡ್ರೋಬ್ರೋಮೈಡ್ ಅಂಶಗಳನ್ನು ಒಳಗೊಂಡ ಎರಡು ನಿರ್ದಿಷ್ಟ ಕೆಮ್ಮಿನ ಸಿರಪ್‌ಗಳಿಗೆ ಸೋಮವಾರದಿಂದ ನಿಷೇಧ ಹೇರಿದೆ.
ಮಧ್ಯಪ್ರದೇಶದಲ್ಲಿ ರವಿವಾರ ಕೆಮ್ಮಿನ ಸಿರಫ್ ಸೇವಿಸಿ ಮತ್ತೆರೆಡು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಉತ್ತರಾಖಂಡ ಸರಕಾರ ಈ ನಿರ್ಣಯ ತೆಗೆದುಕೊಂಡಿದೆ.
‘‘ನಮ್ಮ ಮಕ್ಕಳ ಆರೋಗ್ಯದ ಬಗ್ಗೆ ರಾಜ್ಯ ಸರಕಾರ ಸಂಪೂರ್ಣವಾಗಿ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಸುರಕ್ಷತಾ ಕ್ರಮವಾಗಿ ಈ ನಿಷೇಧ ಜಾರಿಗೆ ತರಲಾಗಿದೆ’’ ಎಂದು ಆರೋಗ್ಯ ಕಾರ್ಯದರ್ಶಿ ಡಾ.ಆರ್. ರಾಜೇಶ್ ಕುಮಾರ್ ಹೇಳಿದ್ದಾರೆ.
ನಿಷೇಧಿತ ಔಷಧಗಳು ಮತ್ತೆ ಮಾರುಕಟ್ಟೆ ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುವಂತೆ ಆಹಾರ ಹಾಗೂ ಔಷಧ ನಿಯಂತ್ರಣ (ಎಫ್‌ಡಿಎ)ಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಡಾ.ರಾಜೇಶ್ ಕುಮಾರ್ ದೃಢಪಡಿಸಿದ್ದಾರೆ.