ಲಿವ್ ಇನ್ ರಿಲೇಶನ್ಶಿಪ್ ನಿಯಮಬದ್ಧಗೊಳಿಸುವುದಕ್ಕೆ ತಪ್ಪೇನಿದೆ?: ಉತ್ತರಾಖಂಡ ಹೈಕೋರ್ಟ್
Photo : ಉತ್ತರಾಖಂಡ ಹೈಕೋರ್ಟ್ | PTI
ಡೆಹ್ರಾಡೂನ್: 2024ರ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಆಲಿಕೆ ನಡೆಸಿದ ಉತ್ತರಾಖಂಡ ಹೈಕೋರ್ಟ್, ಸಹಜೀವನ( ಲಿವ್ ಇನ್ ರಿಲೇಶನ್ಶಿಪ್ )ವನ್ನು ನಿಯಮಬದ್ಧಗೊಳಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದೆ.
ಏಕರೂಪ ನಾಗರಿಕ ಸಂಹಿತೆಯು ಜನವರಿ 27ರಂದು ಜಾರಿಗೆ ಬಂದಿದೆ. ಈ ಕಾನೂನಿನ ಪ್ರಕಾರ ಉತ್ತರಾಖಂಡ ರಾಜ್ಯದೊಳಗೆ ಮತ್ತು ರಾಜ್ಯದಿಂದ ತಾತ್ಕಾಲಿಕವಾಗಿ ವಾಸವಾಗಿರುವ ಲಿವ್ ರಿಲೇಶನ್ಶಿಪ್ ಹೊಂದಿರುವ ಎಲ್ಲಾ ವ್ಯಕ್ತಿಗಳು ತಮ್ಮ ಸಂಬಂಧಗಳನ್ನು ನೋಂದಾವಣೆಗೊಳಿಸಬೇಕಾಗುತ್ತದೆ.
ನೋಂದಾವಣೆಗೆ ವಿಫಲರಾದಲ್ಲಿ ಅವರು ಮೂರು ತಿಂಗಳುಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ.
ಏಕರೂಪ ನಾಗರಿಕಸಂಹಿತೆಯಡಿ ಲಿವ್ ಇನ್ ರಿಲೇಶನ್ಶಿಪ್ ಹೊಂದುವುದನ್ನು ಕಾನೂನಿನ ಮೂಲಕ ನಿಯಂತ್ರಿಸುವುದು ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಚ್ಯುತಿಯುಂಟು ಮಾಡುತ್ತದೆಯೆಂದು ಕೌಟುಂಬಿಕ ಕಾನೂನು ಹಾಗೂ ಮಹಿಳಾ ಹಕ್ಕುಗಳ ನ್ಯಾಯವಾದಿಗಳು ಸೂಚಿಸಿದ್ದಾರೆ.
ಅಲ್ಮಾಸುದ್ದೀನ್ ಸಿದ್ದೀಕಿ ಹಾಗೂ ಇಕ್ರಿಮ್ ಎಂಬಿಬ್ಬರು ವ್ಯಕ್ತಿಗಳು ಹೈಕೋರ್ಟ್ ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಶ್ನಿಸಿದ್ದರು. ಈ ಸಂಹಿತೆಯು ಮುಸ್ಲಿಮರು ಹಾಗೂ ಇತರ ಪೌರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೆಂದು ಅವರು ಆಪಾದಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ನ್ಯಾಯಪೀಠವು ಲಿವ್ ರಿಲೇಶನ್ಶಿಪ್ ಗಳನ್ನು ನೋಂದಾಯಿಸದೆ ಇರುವುದರಿಂದ ಆಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಅರ್ಜಿದಾರರ ಗಮನಸೆಳೆದರು.
ಲಿವ್ ಇನ್ ರಿಲೇಶನ್ಶಿಪ್ ಮುರಿದುಬಿದ್ದಲ್ಲಿ ಏನಾಗಲಿದೆ?, ಒಂದು ವೇಳೆ ಲಿವ್ ಇನ್ ರಿಲೇಶನ್ಶಿಪ್ ನಲ್ಲಿ ಮಗು ಜನಿಸಿದರೇ ಏನು ಮಾಡಬೇಕು? ವೈವಾಹಿಕ ಸಂಬಂಧದಲ್ಲಿ ಪಿತೃತ್ವದ ಬಗ್ಗೆ ಸ್ಪಷ್ಟತೆಯಿರುತ್ತದೆ. ಆದರೆ ಲಿವ್ ರಿಲೇಶನ್ಶಿಪ್ ನಲ್ಲಿ ಆ ಸ್ಪಷ್ಟತೆಯಿದೆಯೇ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.
ಖಾಸಗಿತನದ ಮೇಲಿನ ಆಕ್ರಮಣದ ಸೋಗಿನಲ್ಲಿ ಇನ್ನೋರ್ವ ವ್ಯಕ್ತಿಯ ಅದು ಕೂಡಾ ಆತ ನಿಮ್ಮ ಮಗುವಾಗಿದ್ದರೆ ಮತ್ತು ವಿವಾಹದ ಅಥವಾ ಪಿತೃತ್ವದ ಯಾವುದೇ ಪುರಾವೆಯಿಲ್ಲದೆ ಇದ್ದಲ್ಲಿ ಸ್ವಾಭಿಮಾನವನ್ನು ಬಲಿಗೊಡಬೇಕೇ? ಎಂದು ನ್ಯಾಯಪೀಠ ಪ್ರಶ್ನಿಸಿತು.
ಲಿವ್ ಇನ್ ರಿಲೇಶನ್ಶಿಪ್ ಗಳ ನೋಂದಣಿಯಿಂದ ಪಿತೃತ್ವವನ್ನು ಸಾಬೀತುಪಡಿಸುವುದಕ್ಕೆ ನೆರವಾಗುತ್ತದೆ ಎಂದು ಮುಖ್ಯನ್ಯಾಯಮೂರ್ತಿ ನರೇಂದರ್ ಅಭಿಪ್ರಾಯಿಸಿದರು.
ಉತ್ತರಾಖಂಡ ಹಾಗೂ ಕೇಂದ್ರ ಸರಕಾರಗಳೆರಡನ್ನೂ ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಹಿಳೆಯರ ಸಬಲೀಕರಣದ ಉದ್ದೇಶಿಂದ ಲಿವ್ ಇನ್ ರಿಲೇಶನಂಶಿಪ್ ಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಬಳಿಕ ನ್ಯಾಯಾಲಯವು ಈ ಬಗ್ಗೆ ಅಹವಾಲುಗಳನ್ನು ಸಲ್ಲಿಸುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನೋಟಿಸ್ ಗಳನ್ನು ಜಾರಿಗೊಳಿಸಿತು.