ಕನ್ವರ್ ಯಾತ್ರಾ ಮಾರ್ಗದ ತಿನಿಸುಗಳ ಮಳಿಗೆಗಳಿಗೆ ಪರವಾನಗಿ ಪ್ರದರ್ಶನ ಕಡ್ಡಾಯ: ಉತ್ತರಾಖಂಡ ಸರ್ಕಾರದಿಂದ ಸೂಚನೆ
ಸಾಂದರ್ಭಿಕ ಚಿತ್ರ (PTI)
ಡೆಹ್ರಾಡೂನ್: ಕನ್ವರ್ ಯಾತ್ರೆಯ ಸಂದರ್ಭ, ಯಾತ್ರಿಕರಿಗೆ ಸುರಕ್ಷಿತ ಆಹಾರ ಒದಗಿಸಲು, ಉತ್ತರಾಖಂಡ ಸರ್ಕಾರ ತೀರ್ಥಯಾತ್ರೆ ಮಾರ್ಗದಲ್ಲಿರುವ ತಿನಿಸುಗಳ ಮಳಿಗೆಗಳು , ಹೋಟೆಲ್ ಗಳು, ಧಾಬಾ, ತಳ್ಳುವ ಗಾಡಿಗಳಿಗೆ ಆಹಾರ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ.
“ ಆಹಾರ ತಿನಿಸುಗಳನ್ನು ಮಾರಾಟ ಮಾಡುವ ಪ್ರತಿಯೊಬ್ಬ ವ್ಯಾಪಾರಿಯು ತನ್ನ ಫುಡ್ ಲೈಸೆನ್ಸ್ ಅಥವಾ ನೋಂದಣಿ ಪ್ರಮಾಣಪತ್ರ ಸ್ಪಷ್ಟವಾಗಿ ಕಾಣುವ ಪ್ರತಿಯನ್ನು ಗ್ರಾಹಕರಿಗೆ ಗೋಚರಿಸುವ ರೀತಿಯಲ್ಲಿ ಪ್ರದರ್ಶಿಸಬೇಕು. ಇದರಿಂದ ಗ್ರಾಹಕರು ಆಹಾರದ ನಿಖರ ಮಾನ್ಯತೆಯನ್ನು ಪರಿಶೀಲಿಸಲು ಅನುಕೂಲವಾಗುತ್ತದೆ,” ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ಆಹಾರ ಸುರಕ್ಷತೆ ಆಯುಕ್ತರಾದ ಆರ್. ರಾಜೇಶ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಳ್ಳುವ ಗಾಡಿಗಳಲ್ಲೂ ಆಹಾರವನ್ನು ಮಾರಾಟ ಮಾಡುವ ವ್ಯಾಪಾರಿಗಳು ತಮ್ಮ ನೋಂದಣಿ ಪ್ರಮಾಣಪತ್ರವನ್ನು ಅವರ ಬಳಿ ಇಟ್ಟುಕೊಳ್ಳಬೇಕು ಮತ್ತು ಹತ್ತಿರದಲ್ಲೇ ಪ್ರದರ್ಶಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅದರ ಜೊತೆಗೆ, ಎಲ್ಲಾ ಹೋಟೆಲ್‌ಗಳು, ಧಾಬಾಗಳು, ತಿನಿಸುಗಳ ಮಳಿಗೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸುರಕ್ಷತಾ ಫಲಕವನ್ನು ಗೋಚರಿಸುವ ಸ್ಥಳದಲ್ಲಿ ಇರಿಸಲು ಸೂಚಿಸಲಾಗಿದೆ. ಈ ಫಲಕದಲ್ಲಿ ಸಂಬಂಧಿತ ಆಹಾರದ ಗುಣಮಟ್ಟದ ಬಗ್ಗೆ, ಆಹಾರ ತಯಾರಿಸಿದ ವ್ಯಕ್ತಿಯ ವಿವರಗಳನ್ನು ಒದಗಿಸಬೇಕಾಗುತ್ತದೆ.
ಆಹಾರ ಸುರಕ್ಷತಾ ಕಾಯ್ದೆ 2006ರ ಸೆಕ್ಷನ್ 55ರ ಅಡಿಯಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದರೆ, ಸಂಬಂಧಿತ ವ್ಯಾಪಾರಿಗಳಿಗೆ 2 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
"ಈ ಆದೇಶಗಳ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಿತ ಎಲ್ಲಾ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ತಿಳಿಸಿದರು.
ಕನ್ವರ್ ಯಾತ್ರಾ ಮಾರ್ಗದ ಪೆಂಡಾಲ್‌ಗಳು ಮತ್ತು ಸಮುದಾಯ ಅಡುಗೆಮನೆಗಳಲ್ಲಿ ಭಕ್ತರಿಗೆ ಒದಗಿಸುವ ಆಹಾರದ ಗುಣಮಟ್ಟದ ಮೇಲೂ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಆಹಾರದಲ್ಲಿ ಕಲಬೆರಕೆ ಮಾಡುವವರು ಅಥವಾ ಆಹಾರದ ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾತ್ರಿಕರ ಆರೋಗ್ಯ ನಮ್ಮ ಪ್ರಧಾನ ಆದ್ಯತೆ" ಎಂದು ಆಯುಕ್ತರಾದ ಆರ್. ರಾಜೇಶ್ ಕುಮಾರ್ ತಿಳಿಸಿದರು.
ಆದೇಶವು ಕಟ್ಟುನಿಟ್ಟಾಗಿ ಪಾಲಿಸಲು ಹರಿದ್ವಾರ, ಡೆಹ್ರಾಡೂನ್, ತೆಹ್ರಿ, ಪೌರಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ಪೆಂಡಾಲ್ ಗಳಿಂದ ಹಾಲು, ಸಿಹಿತಿಂಡಿಗಳು, ಎಣ್ಣೆ, ಮಸಾಲೆಗಳು ಹಾಗೂ ಪಾನೀಯಗಳ ಮಾದರಿಗಳನ್ನು ನಿಯಮಿತವಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವ ಕಾರ್ಯವನ್ನು ಆರಂಭಿಸಲಾಗಿದೆ.
“ಯಾವುದೇ ಆಹಾರ ಮಾದರಿಯು ಮಾನದಂಡ ಪೂರೈಸದಿದ್ದರೆ, ಸಂಬಂಧಿತ ತಿನಿಸು ಅಥವಾ ವ್ಯಾಪಾರ ಮಳಿಗೆಗಳನ್ನು ತಕ್ಷಣ ಮುಚ್ಚಲಾಗುತ್ತದೆ” ಎಂದು ಹೆಚ್ಚುವರಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ತಾಜ್‌ಬರ್ ಸಿಂಗ್ ಜಗ್ಗಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.