ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ: ಮುಸ್ಲಿಮ್ ಸಂಘಟನೆಗಳು
PC | X/PUSHKARDHAMI
ಹೊಸದಿಲ್ಲಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯ ಅನುಷ್ಠಾನವನ್ನು ಬಲವಾಗಿ ಖಂಡಿಸಿರುವ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹಾಗೂ ಎಲ್ಲ ಮುಸ್ಲಿಮ್ ಧಾರ್ಮಿಕ ಮತ್ತು ಸಮುದಾಯ ಸಂಘಟನೆಗಳು, ಇದು ದೇಶಕ್ಕೆ ಅತ್ಯಂತ ದುರದೃಷ್ಟಕರ ಮತ್ತು ಹಾನಿಕಾರಕ ಎಂದು ಬಣ್ಣಿಸಿವೆ.
ವಕ್ಫ್ ಕುರಿತ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯು ಎಲ್ಲ ಪ್ರಜಾಸತ್ತಾತ್ಮಕ ಮತ್ತು ನೈತಿಕ ಮೌಲ್ಯಗಳನ್ನು ಉಲ್ಲಂಘಿಸಿದೆ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಿದೆ ಎಂದೂ ಮುಸ್ಲಿಮ್ ನಾಯಕರು ಹೇಳಿದ್ದಾರೆ.
ಕೋಟ್ಯಂತರ ಜನರ ಅಭಿಪ್ರಾಯಗಳು ಮತ್ತು ಭಾವನೆಗಳನ್ನು ಕಡೆಗಣಿಸಿ ಹಾಗೂ ಪ್ರತಿಪಕ್ಷ ಸದಸ್ಯರ ಪ್ರಸ್ತಾವಗಳನ್ನು ತಿರಸ್ಕರಿಸಿ ಮಸೂದೆಯ ಅನುಮೋದನೆಗೆ ಶಿಫಾರಸು ಮಾಡಿರುವುದು ಅಸಮಂಜಸವಾಗಿದೆ. ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ಮುಸ್ಲಿಮರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಉತ್ತರಾಖಂಡದ ಯುಸಿಸಿ ಕಾನೂನು ಪ್ರಜಾಸತ್ತಾತ್ಮಕವಲ್ಲ. ಅದು ಅಸಾಂವಿಧಾನಿಕವಾಗಿದೆ ಮತ್ತು ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲಿನ ದಾಳಿಯಾಗಿದೆ. ಆದ್ದರಿಂದ ಇದು ನಮಗೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ದೇಶದ ಸಂವಿಧಾನವು ಮುಸ್ಲಿಮರು ಸೇರಿದಂತೆ ಎಲ್ಲ ಪ್ರಜೆಗಳಿಗೆ ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಮತ್ತು ಧಾರ್ಮಿಕ ಬೋಧನೆಗಳನ್ನು ಅನುಸರಿಸುವ ಸ್ವಾತಂತ್ರ್ಯದ ಖಾತರಿಯನ್ನು ನೀಡಿದೆ. ಮುಸ್ಲಿಮ್ ವೈಯಕ್ತಿಕ ಕಾನೂನು ಇಸ್ಲಾಮ್‌ನ ಅವಿಭಾಜ್ಯ ಅಂಗವಾಗಿದ್ದು, ಶರೀಯತ್ ಅಪ್ಲಿಕೇಶನ್ ಆ್ಯಕ್ಟ್,1937ರಡಿ ರಕ್ಷಿಸಲ್ಪಟ್ಟಿದೆ. ಈ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಐಎಂಪಿಎಲ್‌ಬಿ ತನ್ನ ಬೆಂಗಳೂರು ಸಭೆಯಲ್ಲಿ ನಿರ್ಧರಿಸಿತ್ತು. ಯಾವುದೇ ಪರಿಸ್ಥಿತಿಯಲ್ಲಿಯೂ ಯುಸಿಸಿಯನ್ನು ತಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಕಳೆದ ಜುಲೈನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮುಸ್ಲಿಮ್, ಸಿಖ್, ಕ್ರಿಶ್ಚಿಯನ್, ಬೌದ್ಧ, ದಲಿತ ಮತ್ತು ಆದಿವಾಸಿ ಸಮುದಾಯಗಳ ನಾಯಕರು ಸ್ಪಷ್ಟಪಡಿಸಿದ್ದರು ಎಂದು ತಿಳಿಸಿರುವ ಸಂಘಟನೆಗಳು, ಆತಂಕ ಪಡದಂತೆ ಮತ್ತು ತಮ್ಮ ಧಾರ್ಮಿಕತೆ ಮತ್ತು ಕಾನೂನುಗಳೊಂದಿಗೆ ರಾಜಿ ಮಾಡಿಕೊಳ್ಳದಂತೆ ಉತ್ತರಾಖಂಡದ ಮುಸ್ಲಿಮರು ಮತ್ತು ಇತರ ನಾಗರಿಕರನ್ನು ಕೋರಿಕೊಂಡಿವೆ. ಪ್ರಜಾಪ್ರಭುತ್ವದ ಪ್ರತಿ ಹಂತದಲ್ಲಿಯೂ ಇದನ್ನು ನಾವು ವಿರೋಧಿಸುತ್ತೇವೆ ಎಂದು ಅವು ಘೋಷಿಸಿವೆ.
ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ಕಬಳಿಸಲು ತಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಎಐಎಂಪಿಎಲ್‌ಬಿ ಮತ್ತು ಎಲ್ಲ ಮುಸ್ಲಿಮ್ ಸಂಘಟನೆಗಳು ಪದೇ ಪದೇ ಸ್ಪಷ್ಟಪಡಿಸಿವೆ. ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಮುಸ್ಲಿಮರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಜೆಪಿಸಿಯು ತನ್ನ ಕಲಾಪಗಳನ್ನು ನಡೆಸುವಲ್ಲಿ ಸಂಸದೀಯ ನಿಯಮಗಳು ಮತ್ತು ಗಡಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಹಾಗೂ ಎಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಅಗೌರವಿಸಿದೆ. ಎಐಎಂಪಿಎಲ್‌ಬಿ ಮತ್ತು ಎಲ್ಲ ಮುಸ್ಲಿಮ್ ಸಂಘಟನೆಗಳು ಲಿಖಿತ ರೂಪದಲ್ಲಿ ಮತ್ತು ಮೌಖಿಕವಾಗಿ ಜೆಪಿಸಿ ಎದುರು ತಮ್ಮ ನಿಲುವನ್ನು ಮಂಡಿಸಿದ್ದವು. ಮುಸ್ಲಿಮರು ಮಸೂದೆಯನ್ನು ವಿರೋಧಿಸಿ ಕೋಟ್ಯಂತರ ಇಮೇಲ್‌ಗಳನ್ನೂ ಕಳುಹಿಸಿದ್ದರು. ಮಂಡಳಿಯ ಉಪಕ್ರಮದಂತೆ 3.66 ಕೋ.ಇಮೇಲ್‌ಗಳನ್ನು ರವಾನಿಸಲಾಗಿತ್ತು. ಇತರ ಮುಸ್ಲಿಮ್ ಸಂಘಟನೆಗಳೂ ಮಸೂದೆಯನ್ನು ವಿರೋಧಿಸಿ ತಮ್ಮ ಅಭಿಪ್ರಾಯಗಳನ್ನು ಜೆಪಿಸಿಗೆ ಸಲ್ಲಿಸಿದ್ದವು ಎಂದು ಅವು ತಿಳಿಸಿವೆ.
ಬೆಂಗಳೂರು ಸಭೆಯಲ್ಲಿ ಎಲ್ಲ ಮುಸ್ಲಿಮ್ ಸಂಘಟನೆಗಳು ತಮ್ಮ ಆರಾಧನಾ ಸ್ಥಳಗಳನ್ನು ಮತ್ತು ಇತರ ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಅಥವಾ ನಾಶಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಜಂಟಿಯಾಗಿ ಸ್ಪಷ್ಟಪಡಿಸಿದ್ದವು. ಸರಕಾರವು ಮುಸ್ಲಿಮರ ತಾಳ್ಮೆಯನ್ನು ಪರೀಕ್ಷಿಸಬಾರದು ಮತ್ತು ದೇಶವನ್ನು ಸರ್ವಾಧಿಕಾರದತ್ತ ಒಯ್ಯುವುದರಿಂದ ದೂರವಿರಬೇಕು. ಅಲ್ಪಸಂಖ್ಯಾತರ ಆಸ್ತಿಗಳನ್ನು ಕಿತ್ತುಕೊಳ್ಳುವ ಪ್ರಯತ್ನವು ಸಂಪೂರ್ಣ ದಬ್ಬಾಳಿಕೆಯಾಗಿದ್ದು,ಇದನ್ನು ನ್ಯಾಯದಲ್ಲಿ ನಂಬಿಕೆ ಹೊಂದಿರುವ ಜನರು ಒಪ್ಪಿಕೊಳ್ಳುವುದಿಲ್ಲ. ಎನ್‌ಡಿಎ ಮಿತ್ರಪಕ್ಷಗಳು ತಮ್ಮ ಹೊಣೆಗಾರಿಕೆಯನ್ನು ಎತ್ತಿ ಹಿಡಿಯುವಲ್ಲಿ ವಿಫಲಗೊಂಡಿರುವುದು ಮತ್ತು ಬಿಜೆಪಿಯ ಕೋಮುವಾದಿ ಅಜೆಂಡಾಗಳನ್ನು ಬೆಂಬಲಿಸುತ್ತಿರುವುದು ವಿಷಾದನೀಯವಾಗಿದೆ. ಸಂಸತ್ತಿನಲ್ಲಿ ಈ ಮಸೂದೆಯು ಮಂಡನೆಯಾದರೆ ಅದನ್ನು ಒಗ್ಗಟ್ಟಿನಿಂದ ವಿರೋಧಿಸುವಂತೆ ನಾವು ಜಾತ್ಯತೀತ ಪಕ್ಷಗಳನ್ನು ಕೋರಿಕೊಳ್ಳುತ್ತಿದ್ದೇವೆ ಎಂದು ಈ ಸಂಘಟನೆಗಳು ತಿಳಿಸಿವೆ.
ಈ ವಿವಾದಾತ್ಮಕ ಮಸೂದೆಯನ್ನು ಹಿಂದೆಗೆದುಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿರುವ ಸಂಘಟನೆಗಳು,ಇಲ್ಲದಿದ್ದರೆ ಮುಸ್ಲಿಮರಿಗೆ ಬೀದಿಗಿಳಿಯುವದನ್ನು ಬಿಟ್ಟರೆ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ತಿಳಿಸಿವೆ.
ವಕ್ಫ್ ಆಸ್ತಿಗಳ ರಕ್ಷಣೆಗಾಗಿ ರಾಷ್ಟವ್ಯಾಪಿ ಆಂದೋಲನ ಸೇರಿದಂತೆ ಎಲ್ಲ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ವಿಧಾನಗಳನ್ನು ನಾವು ಬಳಸುತ್ತೇವೆ.ಅಗತ್ಯವಾದರೆ ಈ ಹೋರಾಟದಲ್ಲಿ ಬೀದಿಗಿಳಿಯಲು ಮತ್ತು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ಸಂಘಟನೆಗಳು ಹೇಳಿವೆ.