ಉತ್ತರಕಾಶಿ | ಮೇಘ ಸ್ಪೋಟ; 400ಕ್ಕೂ ಅಧಿಕ ನಾಗರಿಕರ ರಕ್ಷಣೆ
PC : PTI
ಡೆಹ್ರಾಡೂನ್, ಆ. 8: ಮೇಘ ಸ್ಫೋಟದಿಂದ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದ ಸಂತ್ರಸ್ತವಾದ ಉತ್ತರಕಾಶಿಯ ಧರಾಲಿ ಹಾಗೂ ಹರಸಿಲ್ ನ ಹಲವು ಪ್ರದೇಶಗಳಿಂದ 400ಕ್ಕೂ ಅಧಿಕ ನಾಗರಿಕರನ್ನು ರಕ್ಷಿಸಲಾಗಿದೆ.
ಪ್ರವಾಹ ಹಾಗೂ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಇತರ ಸಂಸ್ಥೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತ ಜನರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಲು ಹೆಲಿಕಾಪ್ಟರ್ ಗಳನ್ನು ಕೂಡ ನಿಯೋಜಿಸಲಾಗಿದೆ. ಹಲವು ಸಂತ್ರಸ್ತರನ್ನು ಮಟ್ಲಿ ಹೆಲಿಪ್ಯಾಡ್ ಗೆ ಕರೆ ತರಲಾಗಿದೆ.
ತೀವ್ರ ಶೋಧದ ಹೊರತಾಗಿಯೂ ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಒಸಿ) ಸೇರಿದಂತೆ 9 ಸೇನಾ ಸಿಬ್ಬಂದಿ ಇದುವರೆಗೆ ಪತ್ತೆಯಾಗಿಲ್ಲ. 50ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ಸೇನೆ ದೃಢಪಡಿಸಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ನಿಧಾನವಾಗುತ್ತಿದೆ. ಭೂಕುಸಿತದಿಂದ ಉತ್ತರಕಾಶಿಯನ್ನು ಇತರ ಪ್ರದೇಶಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ನಾಶವಾಗಿವೆ. ಅಲ್ಲದೆ, ನೆರೆ ಪೀಡಿತ ಧರಾಲಿ ಹಾಗೂ ಹರಸಿಲ್ ನಂತಹ ಪ್ರದೇಶಗಳನ್ನು ಪ್ರತ್ಯೇಕಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.