ಗುಜರಾತ್ | ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳಿದ್ದರೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು: ವಲ್ಸಾಡ್ ಜಿಲ್ಲಾಧಿಕಾರಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ರಾಷ್ಟ್ರೀಯ ಹೆದ್ದಾರಿ 48 ಅನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅಪಾಯಕಾರಿ ಹೊಂಡಗಳು ಉಂಟಾಗಿ ನಾಗರಿಕ ಸಾವು, ನೋವು ಸಂಭವಿಸಿದರೆ ಗುತ್ತಿಗೆದಾರರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ವಲ್ಸಾಡ್ ಜಿಲ್ಲಾಧಿಕಾರಿ ಸಾರ್ವಜನಿಕ ಅಧಿಸೂಚನೆಯಲ್ಲಿ ಎಚ್ಚರಿಸಿದ್ದಾರೆ.
ವಾಪಿಯಿಂದ ವಲ್ಸಾಡ್ ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಹೊಂಡಕ್ಕೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
2025 ಜುಲೈ 11ರ ಅಧಿಸೂಚನೆಯಲ್ಲಿ ಜಿಲ್ಲಾಧಿಕಾರಿ ಭವ್ಯಾ ವರ್ಮಾ, ವಲ್ಸಾಡ್ ಜಿಲ್ಲೆಯ ಮೂಲಕ ಹಾದು ಹೋಗುವ ಮಹಾರಾಷ್ಟ್ರ ಮತ್ತು ಅಲಹಾಬಾದ್ ನಡುವಿನ ಪ್ರಮುಖ ಕೊಂಡಿಯಾದ ಎನ್‌ಎಚ್ 48 ಅಪಾಯಕಾರಿ ಹೊಂಡಗಳಿಂದ ಕೂಡಿದ್ದು, ವಾಹನ ಚಾಲಕರಿಗೆ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ ಎಂದು ಗಮನ ಸೆಳೆದಿದ್ದಾರೆ.
‘‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮದ ಪ್ರಕಾರ ಈ ಹೆದ್ದಾರಿಯ ನಿರ್ವಹಣೆ ಹಾಗೂ ದುರಸ್ಥಿ ಇದನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರ ಪ್ರಮುಖ ಜವಾಬ್ದಾರಿಯಾಗಿದೆ’’ ಎಂದು ವರ್ಮಾ ಹೇಳಿದ್ದಾರೆ.
10 ದಿನಗಳ ಒಳಗೆ ದುರಸ್ಥಿಯನ್ನು ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ. ವಿಫಲವಾದರೆ, ಜಿಲ್ಲಾಡಳಿತದಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.