×
Ad

ಉಪಕುಲಪತಿ ನೇಮಕಾತಿ: ತಮಿಳುನಾಡಿನ ತಿದ್ದುಪಡಿಗಳಿಗೆ ಮದ್ರಾಸ್‌ ಹೈಕೋರ್ಟ್ ತಡೆ

Update: 2025-05-22 21:18 IST

ಮದ್ರಾಸ್‌ ಹೈಕೋರ್ಟ್ | PC : PTI

ಚೆನ್ನೈ: ತಮಿಳುನಾಡು ಸರಕಾರ ಮತ್ತು ರಾಜ್ಯಪಾಲರ ಕಚೇರಿ ನಡುವೆ ಹೆಚ್ಚುತ್ತಿರುವ ಜಟಾಪಟಿಯ ನಡುವೆಯೇ ಮದರಾಸು ಹೈಕೋರ್ಟ್ ಬುಧವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ, ವಿಶ್ವವಿದ್ಯಾಲಯ ನೇಮಕಾತಿ ನಿಯಮಗಳಿಗೆ ರಾಜ್ಯ ವಿಧಾನಸಭೆಯು ಕಳೆದ ವರ್ಷ ತಂದಿರುವ ಹಲವು ತಿದ್ದುಪಡಿಗಳ ಜಾರಿಗೆ ತಡೆಯಾಜ್ಞೆ ನೀಡಿದೆ.

ಈ ತಿದ್ದುಪಡಿಗಳು, ರಾಜ್ಯ ಸರಕಾರ ನಡೆಸುತ್ತಿರುವ ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ರಾಜ್ಯಪಾಲರ ಬದಲಿಗೆ ರಾಜ್ಯ ಸರಕಾರಕ್ಕೆ ನೀಡುತ್ತವೆ.

ಸಂಜೆ 7 ಗಂಟೆಯವರೆಗೂ ನಡೆದ ಸುದೀರ್ಘ ವಿಚಾರಣೆಯ ಬಳಿಕ, ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮಿನಾರಾಯಣನ್ ಅವರನ್ನೊಳಗೊಂಡ ರಜಾಕಾಲದ ಪೀಠವೊಂದು ಈ ತೀರ್ಪು ನೀಡಿತು. ನ್ಯಾಯಾಲಯದ ಬೇಸಿಗೆ ರಜೆ ಮುಗಿಯುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂಬ ರಾಜ್ಯ ಸರಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ತಿರುನೆಲ್ವೇಲಿಯ ವಕೀಲ ಹಾಗೂ ಬಿಜೆಪಿ ನಾಯಕ ಕೆ. ವೆಂಕಟಚಲಪತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪು ನೀಡಿತು.

ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ 10 ಕಾಯ್ದೆಗಳಿಗೆ ತರಲಾಗಿರುವ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News