ನನಗೆ ಎಲ್ಲವನ್ನೂ ನೀಡಿರುವ ಅಭಿಮಾನಿಗಳ ಪರವಾಗಿ ನಿಲ್ಲಲು ನಾನು ಸಿನಿಮಾ ತೊರೆದೆ: ಭಾವುಕರಾದ ನಟ ವಿಜಯ್
‘ಜನನಾಯಗನ್’ ಆಡಿಯೊ ಬಿಡುಗಡೆ ಸಮಾರಂಭ
ವಿಜಯ್ | Photo Credit : ANI
ಕೌಲಾಲಂಪುರ್ (ಮಲೇಶಿಯಾ): ನನಗೆ ಕೋಟೆ ಸೇರಿದಂತೆ ಎಲ್ಲವನ್ನೂ ನೀಡಿರುವ ಅಭಿಮಾನಿಗಳ ಪರವಾಗಿ ನಿಲ್ಲಲು ನಾನು ಸಿನಿಮಾ ಉದ್ಯಮ ತೊರೆದೆ ಎಂದು ನಟ, ಟಿವಿಕೆ ಮುಖ್ಯಸ್ಥ ವಿಜಯ್ ಹೇಳಿದ್ದಾರೆ. ಮಲೇಶಿಯಾದಲ್ಲಿ ಆಯೋಜಿಸಲಾಗಿದ್ದ ‘ಜನನಾಯಗನ್’ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಅವರು ಈ ಹೇಳಿಕೆ ನೀಡಿದ್ದಾರೆ.
“ನಾನು ಸಿನಿಮಾ ಉದ್ಯಮಕ್ಕೆ ಕಾಲಿಟ್ಟಾಗ, ನಾನು ಮರಳಿನ ಗೂಡು ಕಟ್ಟುತ್ತಿದ್ದೇನೆ ಎಂದು ಅಂದುಕೊಂಡಿದ್ದೆ. ಆದರೆ, ನೀವೆಲ್ಲ ನನಗಾಗಿ ಅರಮನೆಯನ್ನೇ ನಿರ್ಮಿಸಿಕೊಟ್ಟಿರಿ. ಕೋಟೆಯೊಂದನ್ನು ಕಟ್ಟಲು ಅಭಿಮಾನಿಗಳು ನನಗೆ ನೆರವು ನೀಡಿದರು. ಹೀಗಾಗಿಯೇ ನಾನು ಅವರ ಪರವಾಗಿ ನಿಲ್ಲಲು ನಿರ್ಧರಿಸಿದೆ. ನನಗೆ ಎಲ್ಲವನ್ನೂ ನೀಡಿದ ಅಭಿಮಾನಿಗಳಿಗಾಗಿ ನಾನು ಸಿನಿಮಾವನ್ನೇ ಬಿಡಲು ನಿರ್ಧರಿಸಿದೆ” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
“ನನ್ನನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರಗಳಿಗೆ ಬರುತ್ತಿದ್ದರು. ಇದೀಗ ನಾನು ಮುಂದಿನ 30ರಿಂದ 33 ವರ್ಷಗಳ ಕಾಲ ಅವರಿಗಾಗಿ ನಿಲ್ಲಲಿದ್ದೇನೆ. ನಾನು ಇತರರಿಂದ ಟೀಕೆ ಎದುರಿಸಿದಾಗಲೂ ಅವರು ನನಗೆ ನಿಷ್ಠರಾಗಿದ್ದಾರೆ. ಈ ವಿಜಯ್ ತನ್ನ ಕೃತಜ್ಞತೆಯ ಸಾಲವನ್ನು ಮರಳಿಸಲಿದ್ದಾನೆ” ಎಂದು ಅವರು ಭರವಸೆ ನೀಡಿದ್ದಾರೆ.
ನಿರ್ದಿಷ್ಟವಾಗಿ ಮಲೇಶಿಯಾ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ವಿಜಯ್, ಮಲೇಶಿಯಾದಲ್ಲಿ ಚಿತ್ರೀಕರಣಗೊಂಡಿದ್ದ ತಮ್ಮ ಸಿನಿಮಾವೊಂದನ್ನು ಸ್ಮರಿಸಿದರು. “ನಾನಿಲ್ಲಿಗೆ ಕುರುವಿ ಹಾಗೂ ಕಾವಲನ್ ಚಿತ್ರೀಕರಣಕ್ಕಾಗಿ ಬಂದಿದ್ದದ್ದು ನೆನಪಾಗುತ್ತಿದೆ” ಎಂದು ಹೇಳಿದರು. ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಸಹೋದ್ಯೋಗಿ ಅಜಿತ್ ಕುಮಾರ್ ಕುರಿತು ಪ್ರಸ್ತಾಪಿಸಿದಾಗ, ಸಭಾಂಗಣದಲ್ಲಿದ್ದ ಅಭಿಮಾನಿಗಳೆಲ್ಲ ಎದ್ದು ನಿಂತು ಹರ್ಷೋದ್ಗಾರ ಮಾಡಿದರು. ಈ ವೇಳೆ, “ನನ್ನ ಸ್ನೇಹಿತ ಅಜಿತ್ ಕುಮಾರ್ ನ ‘ಬಿಲ್ಲಾ’ ಚಿತ್ರ ಮಲೇಶಿಯಾದಲ್ಲಿ ಚಿತ್ರೀಕರಣಗೊಂಡಿತ್ತು” ಎಂದೂ ಅವರು ಸ್ಮರಿಸಿದರು.
ಈ ಸಮಾರಂಭದಲ್ಲಿ ಹಿರಿಯ ನಟ ನಾಸರ್, ‘ಜನನಾಯಗನ್’ ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆ, ಚಿತ್ರದ ನಿರ್ದೇಶಕ ಎಚ್.ವಿನೋದ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ತಮಿಳು ಚಿತ್ರರಂಗದ ನಿರ್ದೇಶಕರಾದ ಅಟ್ಲೀ, ನೆಲ್ಸನ್ ಹಾಗೂ ಲೋಕೇಶ್ ಕನಗರಾಜ್ ಅವರು ನಟ ವಿಜಯ್ ರೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
‘ಜನನಾಯಗನ್’ ತಾರಾಗಣದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಇದ್ದಾರೆ. ಈ ಚಿತ್ರ ಜನವರಿ 9, 2026ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.