ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಈಡಿಯಿಂದ 29 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ: ಪಟ್ಟಿಯಲ್ಲಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಹೆಸರು
ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ (Photo: PTI)
ಹೈದರಾಬಾದ್: ಅಕ್ರಮ ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ)ಯು 29 ಮಂದಿ ಸೆಲೆಬ್ರಿಟಿಗಳ ವಿರುದ್ಧ ಎನ್ಫೋಸ್ಮೆಂಟ್ ಕೇಸ್ ಇನ್ಫರ್ಮೇಷನ್ ರಿಪೋರ್ಟ್ (ಜಾರಿ ಪ್ರಕರಣದ ಮಾಹಿತಿ ವರದಿ - ECIR) ದಾಖಲಿಸಿದೆ. ಪ್ರಕರಣದಲ್ಲಿ ತೆಲುಗು ಚಿತ್ರರಂಗದ ಪ್ರಮುಖ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ, ಕಿರುತೆರೆ ನಟರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ಯೂಟ್ಯೂಬರ್ಗಳು ಸೇರಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಸಲ್ಲಿಸಲಾದ ಐದು ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಆಧರಿಸಿ ಜಾರಿ ನಿರ್ದೇಶನಾಲಯ(ಈಡಿ)ವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ಕೈಗೊಂಡಿದೆ.
ಜಂಗ್ಲೀ ರಮ್ಮಿ, A23, ಜೀಟ್‌ವಿನ್, ಪ್ಯಾರಿಮ್ಯಾಚ್ ಮತ್ತು ಲೋಟಸ್365 ಎಂಬ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳನ್ನು ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಸೆಲೆಬ್ರಿಟಿಗಳು ಪ್ರಚಾರ ಮಾಡಿದ್ದು, ಇದರಿಂದಾಗಿ 1867ರ ಸಾರ್ವಜನಿಕ ಜೂಜಾಟ ಕಾಯ್ದೆ ಹಾಗೂ ಹಣದ ಅಕ್ರಮ ವರ್ಗಾವಣೆಗೆ ತಡೆ ನೀಡುವ ಪಿಎಂಎಲ್‌ಎ ಕಾಯ್ದೆ ಉಲ್ಲಂಘನೆ ನಡೆದಿದೆ ಎಂಬುದಾಗಿ ಈಡಿಯು ಆರೋಪಿಸಿದೆ.
ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ನಿಧಿ ಅಗರ್ವಾಲ್, ಪ್ರಣೀತಾ ಸುಭಾಷ್, ಮಂಚು ಲಕ್ಷ್ಮಿ ಮತ್ತು ಅನನ್ಯ ನಾಗೆಲ್ಲಾ ಅವರ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ. ಅದರೊಂದಿಗೆ ಕಿರುತೆರೆ ನಟರಾದ ಶ್ರೀಮುಖಿ, ಶ್ಯಾಮಲಾ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಬಾ ಶೆಟ್ಟಿ, ಅಮೃತಾ ಚೌದರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಹರ್ಷ ಸಾಯಿ ಮತ್ತು ಬಯ್ಯ ಸನ್ನಿ ಯಾದವ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳೂ ಈ ಪಟ್ಟಿಯಲ್ಲಿದ್ದಾರೆ.
ಈ ಪೈಕಿ ಕೆಲವು ಸೆಲೆಬ್ರಿಟಿಗಳು ತಮ್ಮ ಪ್ರಚಾರ ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದರೂ ಪ್ರಕರಣದಲ್ಲಿ ಅವರನ್ನು ಕೈ ಬಿಟ್ಟಿಲ್ಲ.
ಈಡಿ ದಾಖಲಿಸಿದ ECIR ಪ್ರಾಥಮಿಕ ಎಫ್‌ಐಆರ್‌ಗಳನ್ನು ಆಧರಿಸಿದೆ. ಈ ಎಫ್‌ಐಆರ್‌ಗಳು ಪಂಜಗುಟ್ಟಾ, ಮಿಯಾಪುರ್, ಸೈಬರಾಬಾದ್, ಸೂರ್ಯಪೇಟ್ ಮತ್ತು ವಿಶಾಖಪಟ್ಟಣಂ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಬಿಎನ್‌ಎಸ್ ಸೆಕ್ಷನ್ 318(4), 112 r/w 49, ತೆಲಂಗಾಣ ಗೇಮಿಂಗ್ ಆಕ್ಟ್ ಸೆಕ್ಷನ್ 3, 3(A), 4 ಮತ್ತು ಐಟಿ ಆಕ್ಟ್ ಸೆಕ್ಷನ್ 66D ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಮಾರ್ಚ್ ನಲ್ಲಿ ಸೈಬರಾಬಾದ್ ಪೊಲೀಸರು ಇದೇ ಪ್ರಕರಣದಲ್ಲಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದರು. ದೇವರಕೊಂಡ ಹಾಗೂ ದಗ್ಗುಬಾಟಿ ಕಾನೂನುಬದ್ಧವಾದ ಕೌಶಲ್ಯ ಆಧಾರಿತ ಆಟಗಳನ್ನಷ್ಟೇ ಪ್ರಚಾರ ಮಾಡಿದ್ದೇವೆ ಎಂದು ಹೇಳಿದರೆ, ಪ್ರಕಾಶ್ ರಾಜ್ 2017 ನಂತರ ಯಾವುದೇ ಬೆಟ್ಟಿಂಗ್ ಆ್ಯಪ್‌ಗಳೊಂದಿಗೆ ಒಪ್ಪಂದ ನವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್ ನಿವಾಸಿ ಫಣಿದ್ರಾ ಶರ್ಮಾ ಅವರು ನೀಡಿದ ದೂರಿನಲ್ಲಿ, ಈ ಸೆಲೆಬ್ರಿಟಿಗಳ ಬೆಟ್ಟಿಂಗ್ ಆಪ್ ಗಳ ಪರ ಪ್ರಚಾರವು ಸಾಮಾನ್ಯ ಜನರ ಜೀವನಶೈಲಿಗೆ ಹಾನಿಕಾರಕವಾಗಿದೆ ಎಂದು ಆರೋಪಿಸಿದ್ದರು.