×
Ad

ಟಿಕೆಟ್ ಇಲ್ಲದೆ ಪ್ರಯಾಣಿಸಲು ಅವಕಾಶ ನೀಡದಿದ್ದಕ್ಕೆ ರೈಲು ಹಳಿಗಳಿಗೆ ಹಾನಿ ಮಾಡಿದ್ದ ಸ್ವಘೋಷಿತ ದೇವಮಾನವ ವಿಜಯ್ ಕುಮಾರ್ !

Update: 2025-05-30 18:03 IST

PC : timesofindia.indiatimes.com

ಚೆನ್ನೈ: ದೇಶಾದ್ಯಂತ ಕಳವಳಕ್ಕೆ ಕಾರಣವಾಗಿದ್ದ ತಮಿಳುನಾಡು, ತೆಲಂಗಾಣದಲ್ಲಿ ನಡೆದಿದ್ದ ಸರಣಿ ರೈಲು ಹಳಿ ವಿಧ್ವಂಸ ಕೃತ್ಯದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದು, ನನಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಅವಕಾಶ ನೀಡದೆ, ನನ್ನನ್ನು ರೈಲಿನಿಂದ ಹೊರ ಹಾಕಿದ್ದ ಕ್ರಮದಿಂದ ಆಕ್ರೋಶಗೊಂಡು ನಾನು ಈ ಕೃತ್ಯವೆಸಗಿದೆ ಎಂದು ಆರೋಪಿ ಸ್ವಘೋಷಿತ ದೇವಮಾನವನೊಬ್ಬ ತಪ್ಪೊಪ್ಪಿಕೊಂಡಿದ್ದಾನೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಪ್ರಿಲ್ 26ರಿಂದ ಎಪ್ರಿಲ್ 29ರ ನಡುವೆ ಅವಡಿ, ಅಂಬತ್ತೂರ್ ಹಾಗೂ ಅರಕ್ಕೋಣಂನಲ್ಲಿ ಸಂಭವಿಸಿದ್ದ ಸರಣಿ ರೈಲು ಹಳಿ ವಿಧ್ವಂಸಕ ಕೃತ್ಯವು ದೇಶಾದ್ಯಂತ ಕಳವಳವಕ್ಕೆ ಕಾರಣವಾಗಿತ್ತು. ಇದರ ಬೆನ್ನಿಗೇ ಪ್ರಾರಂಭಗೊಂಡಿದ್ದ ತನಿಖೆಯಲ್ಲಿ ರಾಷ್ಡ್ರೀಯ ತನಿಖಾ ದಳ (NIA) ಕೂಡಾ ಕೈಜೋಡಿಸಿತ್ತು.

ಅದರೆ, ತನಿಖೆಯ ವೇಳೆ ಪತ್ತೆಯಾದ ಆರೋಪಿಯು ಒಡಿಶಾದ 43 ವರ್ಷದ ವ್ಯಕ್ತಿಯಾಗಿದ್ದು, ಆತ ತನ್ನನ್ನು ತಾನು ದೇವಮಾನವನೆಂದು ಸ್ವಯಂ ಘೋಷಿಸಿಕೊಂಡಿದ್ದಾನೆ.

ತನ್ನ ಮೈಮೇಲೆ ʼOm from Haridwar on a spiritual journey' ಎಂದು ಬರೆದುಕೊಂಡಿರುವ ಈ ಸ್ವಘೋಷಿತ ದೇವಮಾನವ, ದೇವಮಾನವರು ಟಿಕೆಟ್ ಖರೀದಿಸಬೇಕು ಎಂಬ ನಿಯಮಗಳನ್ನು ಮೀರಿದವರಾಗಿರುವುದರಿಂದ, ಅವರಿಗೆ ಇಂತಹ ನಿಯಮಗಳು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾನೆ.

ತಮಿಳುನಾಡಿನ ಅಂಬತ್ತೂರ್ ಹಾಗೂ ಅರಕ್ಕೋಣಂನಲ್ಲಿ ಸಂಭವಿಸಿದ್ದ ಸರಣಿ ರೈಲು ಹಳಿ ವಿಧ್ವಂಸ ಕೃತ್ಯದ ಬೆನ್ನಿಗೇ, ಆರೋಪಿಯ ಜಾಡನ್ನಿಡಿದು ತಮಿಳುನಾಡು ಪೊಲೀಸರು ಹರಿದ್ವಾರಕ್ಕೆ ತೆರಳಿದ್ದರು. ಆದರೆ, ಈ 'ಓಂ' ಎಂಬ ಈ ವ್ಯಕ್ತಿಯ ಕುರಿತು ಅವರಿಗೆ ಯಾವುದೇ ದಾಖಲೆ ದೊರೆಯದಿದ್ದರೂ, ಆತನ ಹೆಸರು ವಿಜಯ್ ಕುಮಾರ್ ಆಗಿದ್ದು, ಅಲೆಮಾರಿಯಾದ ಆತ, ತುರುತ್ತನಿಯ ಮಠವೊಂದರಲ್ಲಿ ತಂಗುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸಿದ್ದ ಎಂಬ ಸಂಗತಿ ಪತ್ತೆಯಾಗಿತ್ತು.

ಕಾಚಿಗುಡ ಹಾಗೂ ಬುದ್ವೇಲ್ ನಡುವಿನ ರೈಲು ಹಳಿಗಳನ್ನು ವಿಧ್ವಂಸಗೊಳಿಸಿದ ಎರಡು ವಾರಗಳ ನಂತರ, ಪೊಲೀಸರು ಆರೋಪಿಯನ್ನು ಹೈದರಾಬಾದ್‌ನಲ್ಲಿ ಸೆರೆ ಹಿಡಿಯುವ ಮೂಲಕ, ಆತನ ಆಟಕ್ಕೆ ತೆರೆ ಎಳೆದಿದ್ದಾರೆ.

ಹೈದರಾಬಾದ್‌ನಿಂದ ಆರೋಪಿ ದೇವಮಾನವನನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ತಮಿಳುನಾಡಿಗೆ ಕರೆ ತಂದ ತಮಿಳುನಾಡು ಪೊಲೀಸರು, ಆತನನ್ನು ನ್ಯಾಯಾಲಯದೆದುರು ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಆತನನ್ನು ಇದೀಗ ಪುಳಲ್ ಬಂದೀಖಾನೆಯಲ್ಲಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News