×
Ad

ದೇಶದ ಸೇವೆಯಲ್ಲಿರುವ ಮಿಸ್ರಿ ವಿರುದ್ಧ ದ್ವೇಷ ಕಾರುವ ಟ್ರೋಲ್ ಅಭಿಯಾನ!

Update: 2025-05-11 20:57 IST

ಹೊಸದಿಲ್ಲಿ: ಹಿಂದೂ ಬಲಪಂಥೀಯ ಗುಂಪುಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ಆನ್ ಲೈನ್ ನಿಂದನೆಯು ಹೆಚ್ಚಾಗುತ್ತಿದ್ದಂತೆ, ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯನ್ನು ಲಾಕ್ ಮಾಡಿದ್ದಾರೆ.

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀಕರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಬೆನ್ನಿಗೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು.

ಸತತ ಮೂರು ದಿನಗಳ ಕಾಲ ನಡೆದ ಸಂಘರ್ಷದ ನಂತರ, ಮೇ 10ರಂದು ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತ್ತು. ಇದಾದ ನಂತರ, ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ವಿರುದ್ಧ ಸಂಯೋಜಿತ ಟ್ರೋಲ್ ಕಿರುಕುಳ ಪ್ರಾರಂಭವಾಗಿದೆ.

ಟ್ರೋಲರ್ ಗಳು ಮಿಸ್ರಿ ಹಾಗೂ ಅವರ ಕುಟುಂಬದವರ ಹಳೆಯ ಟ್ವೀಟ್ ಗಳನ್ನು ಹೊರ ತೆಗೆದು, ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. ಈ ವಿವಾದಕ್ಕೆ ಮಿಸ್ರಿಯವರ ಪುತ್ರಿಯವರನ್ನೂ ಎಳೆದು ತಂದಿದ್ದರಿಂದ, ಪರಿಸ್ಥಿತಿ ಮತ್ತಷ್ಟು ವಿಷಮಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು, ಆಕೆಯ ಮೇಲೆ ನಿಂದನೆಗಳ ಸುರಿಮಳೆಯನ್ನು ಸುರಿಸಲಾಗಿತ್ತು ಎಂದು ವರದಿಯಾಗಿದೆ.

ಈ ಹಿಂದೆ ರಾಜತಾಂತ್ರಿಕ ವಿಕ್ರಂ ಮಿಸ್ರಿ ಅವರ ಪುತ್ರಿ ರೊಹಿಂಗ್ಯಾರ ಹಕ್ಕುಗಳ ಪರವಾಗಿ ವಕಾಲತ್ತು ವಹಿಸಿದ್ದರು ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿನ ಚರ್ಚೆಗಳಿಂದ ವ್ಯಕ್ತವಾಗಿದ್ದು, ಈ ಹಿನ್ನೆಲೆಯನ್ನೇ ಟ್ರೋಲರ್ ಗಳು ನಿಂದನೆಗಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಉನ್ನತ ದರ್ಜೆಯ ರಾಜತಾಂತ್ರಿಕರೊಬ್ಬರ ವಿರುದ್ಧ ನಡೆದಿರುವ ಈ ಆನ್ ಲೈನ್ ಟ್ರೋಲ್ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಹಿಂದೆ ವಿಕ್ರಂ ಮಿಸ್ರಿಯನ್ನು ದೇಶಪ್ರೇಮಿ ಕಾಶ್ಮೀರ ಪಂಡಿತ ಎಂದು ಶ್ಲಾಘಿಸುತ್ತಿದ್ದವರೇ, ದಿಢೀರೆಂದು ಅವರ ವಿರುದ್ಧ ತಿರುಗಿ ಬಿದ್ದಿರುವುದರತ್ತ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬೊಟ್ಟು ಮಾಡಿದ್ದಾರೆ.

ವಿಕ್ರಂ ಮಿಸ್ರಿಯವರನ್ನು ಗುರಿಯಾಗಿಸಿಕೊಂಡು ನಡೆದಿರುವ ಈ ಕಿರುಕುಳದ ವಿರುದ್ಧ ಹಲವಾರು ಗಣ್ಯ ವ್ಯಕ್ತಿಗಳು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ಧ್ವನಿ ಎತ್ತಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, “ವಿಕ್ರಂ ಮಿಸ್ರಿ ಅವರು ನಮ್ಮ ದೇಶಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿರುವ ಸಭ್ಯ ಹಾಗೂ ಪ್ರಾಮಾಣಿಕ ರಾಜತಾಂತ್ರಿಕರಾಗಿದ್ದಾರೆ. ನಮ್ಮ ಸಾರ್ವಜನಿಕ ಸೇವಕರು ಕಾರ್ಯಾಂಗದಡಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಹಾಗೂ ಕಾರ್ಯಾಂಗ ಅಥವಾ ಸರಕಾರವನ್ನು ನಡೆಸುತ್ತಿರುವ ರಾಜಕೀಯ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರನ್ನು ದೂಷಿಸಬಾರದು” ಎಂದು ವಿಕ್ರಂ ಮಿಸ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಕ್ರಂ ಮಿಸ್ರಿ ವಿರುದ್ಧ ನಡೆದಿರುವ ಈ ಟ್ರೋಲ್ ಅನ್ನು ಪತ್ರಕರ್ತ ಅಭಿಸಾರ್ ಶರ್ಮ ಕೂಡಾ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಿಮದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, “ಈಗ ಮಿತಿ ಮೀರಲಾಗಿದೆ. ಸಂಸ್ಕಾರಿ ಪ್ರಚಾರ ಯಂತ್ರವೀಗ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿಯನ್ನು ಟ್ರೋಲ್ ಮಾಡುತ್ತಿದೆಯೆ? ನಿಮಗೆ ಯಾವುದೇ ನಾಚಿಕೆಯಿಲ್ಲವೆ? ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ರಾಜತಾಂತ್ರಿಕ ವರ್ಚಸ್ಸನ್ನು ಬಲವಾಗಿ ಮಂಡಿಸುತ್ತಿರುವ ಅದೇ ವಿಕ್ರಂ ಮಿಸ್ರಿ ಇವರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮುಖವಾಗಿದ್ದಾರೆ. ಈಗ ಅವರ ವಿರುದ್ಧ ಪ್ರಶ್ನೆಗಳನ್ನೆತ್ತಲಾಗುತ್ತಿದೆಯೆ? ಈ ಟ್ರೋಲಿಂಗ್ ಕೇವಲ ಅನೈತಿಕ ಮಾತ್ರವಲ್ಲ; ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೃತ್ತಿಪರರ ಮನೋಬಲದ ಮೇಲಿನ ದಾಳಿಯಾಗಿದೆ. ವಿದೇಶಾಂಗ ಕಾರ್ಯದರ್ಶಿಯಂತಹ ಗೌರವಾನ್ವಿತ ಅಧಿಕಾರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಸಂಸ್ಕಾರಿ ಗೂಂಡಾಗಳಿಗೆ ದೇಶ ಪ್ರೇಮ ಕೇವಲ ನೆಪವಾಗಿದೆ. ಅವರಿಗೆ ದೇಶದ ಬಗ್ಗೆಯಾಗಲಿ ಅಥವಾ ಸೇವೆಯ ಬಗ್ಗೆಯಾಗಲಿ ಯಾವುದೇ ಕಾಳಜಿಯಿಲ್ಲ. ಅವರ ನಿಷ್ಠೆಯೇನಿದ್ದರೂ ದ್ವೇಷಕ್ಕಾಗಿದ್ದು, ಅವರ ಕುರುಡು ಭಕ್ತಿಯು ಕೇವಲ ಒಂದೇ ಒಂದು ಪಕ್ಷದ ಪರವಾಗಿದೆ. ಯಾರು ಹಿರಿಯ ಅಧಿಕಾರಿಯ ಕುಟುಂಬ ಹಾಗೂ ಅವರ ಮಕ್ಕಳ ವಿರುದ್ಧವೂ ಅಶ್ಲೀಿಲ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೊ, ಅಂಥವರು ವಾಸ್ತವವಾಗಿ ಸಮಾಜದ ಪಾಲಿನ ಅಪಮಾನವಾಗಿದ್ದಾರೆ. ಅವರಿಗಿಂತ ದೊಡ್ಡ ದೇಶದ್ರೋಹಿಗಳು ಮತ್ತೊಬ್ಬರಿರಲು ಸಾಧ್ಯವಿಲ್ಲ. ನಿಮಗೆ ನಾಚಿಕೆಯಾಗಬೇಕು – ದೇಶ ಪ್ರೇಮದ ಹೆಸರಲ್ಲಿ ನೀವು ಕೇವಲ ವಿಷವನ್ನು ಮಾತ್ರ ಕಕ್ಕುತ್ತಿದ್ದೀರಿ” ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ನ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಕೂಡಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “36 ಗಂಟೆಗಳ ಹಿಂದೆ, ಕರಾಚಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಮಾಧ್ಯಮಗಳು ಮೋದಿ ಬೆಂಬಲಿಗರಿಗೆ ಹೇಳುತ್ತಿದ್ದವು. ಆದರೆ, ಕಳೆದ ಸಂಜೆಯಿಂದ ಅವೆಲ್ಲ ಸುಳ್ಳು ಸಂಗತಿಗಳಾಗಿದ್ದವು ಎಂಬ ವಾಸ್ತವವನ್ನು ಮಾತ್ರ ಅವು ನಿಭಾಯಿಸಬೇಕಾಗಿ ಬಂದಿಲ್ಲ. ಬದಲಿಗೆ ಟ್ರಂಪ್ ಅವರು ಮೋದಿಗೆ ತಮ್ಮ ಸ್ಥಾನ ತೋರಿಸಿದ್ದಾರೆ ಎಂಬ ಸತ್ಯವನ್ನೂ ಹೇಳಬೇಕಾಗಿ ಬಂದಿದೆ. ತಮಗೇನನ್ನಿಸುತ್ತಿದೆ ಎಂಬುದನ್ನು ಅವರು ಹೇಗೆ ತಾನೆ ವ್ಯಕ್ತಪಡಿಸಲು ಸಾಧ್ಯ ? ಇಂತಹ ನಂಜಿನೊಂದಿಗೆ ಅಧಿಕಾರಿ ಹಾಗೂ ಅವರ ಪುತ್ರಿಯ ಮೇಲೆ ದಾಳಿ ನಡೆಸುತ್ತಿರುವುದೇಕೆಂದರೆ, ಮೋದಿಯ ಹಸಿರು ನಿಶಾನೆಯಿಲ್ಲದೆ ಗುದ್ದಲಿಯೊಂದನ್ನು ಗುದ್ದಲಿ ಎಂದು ಹೇಳಲು ಅವಕ್ಕೆ ನೈತಿಕ ಬೆನ್ನುಮೂಳೆ ಇಲ್ಲದೆ ಇರುವುದರಿಂದ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಮೊದಲು ಅವರು ಮೃತ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ರ ಪತ್ನಿ ಹಿಮಾಂಶಿ ನರ್ವಾಲ್ ಮೇಲೆ ಮುಗಿಬಿದ್ದರು. ಇದೀಗ ಕೆಲವು ಟ್ರೋಲರ್ ಗಳು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹಾಗೂ ಅವರ ಪುತ್ರಿಯ ಮೇಲೆ ಮುಗಿಬಿದ್ದಿದ್ದು, ಆಕೆಯ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು, ಅವರನ್ನು ನಿಂದಿಸುತ್ತಿದ್ದಾರೆ” ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ವಿಷಾದಿಸಿದ್ದಾರೆ.

ಇದರೊಂದಿಗೆ, ಅಸಂಖ್ಯಾತ ಸಾಮಾಜಿಕ ಮಾಧ್ಯಮ ಬಳಕೆದಾರರೂ ಈ ಟ್ರೋಲ್ ಅಭಿಯಾನದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅಸಹಿಷ್ಣುತೆಯನ್ನು ಪ್ರಶ್ನಿಸಿರುವ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, “ಇದು ತೀರಾ ಹೃದಯವಿದ್ರಾವಕ ಸಂಗತಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿಕ್ರಂ ಮಿಸ್ರಿ ಸಾರ್ವಜನಿಕ ಸೇವಕರಾಗಿದ್ದು, ಸರಕಾರದ ನಿರ್ಧಾರಗಳಿಗೆ ಜವಾಬ್ದಾರರಾಗಿರುವ ರಾಜಕೀಯ ನಾಯಕರಲ್ಲ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ನಿಂದನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ತೀವ್ರಗೊಂಡಿದ್ದು, ಸರಕಾರವು ತನ್ನ ಅಧಿಕಾರಿಗಳು ಹಾಗೂ ಅವರ ಕುಟುಂಬಗಳ ಘನತೆಯ ಸುರಕ್ಷತೆಯನ್ನು ಖಾತರಿಗೊಳಿಸಬೇಕು ಎಂದು ಒತ್ತಾಯ ತೀವ್ರಗೊಂಡಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News