×
Ad

ಪಾಕ್‌ ನಿಂದ ಅಣ್ವಸ್ತ್ರ ದಾಳಿಯ ಬೆದರಿಕೆ ಎದುರಾಗಿರಲಿಲ್ಲ: ಸಂಸದೀಯ ಸಮಿತಿಗೆ ಸಭೆಯಲ್ಲಿ ವಿಕ್ರಮ್ ಮಿಸ್ರಿ ವಿವರಣೆ

Update: 2025-05-19 21:54 IST

ವಿಕ್ರಮ್ ಮಿಸ್ರಿ | PTI 

ಹೊಸದಿಲ್ಲಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಯಾವಾಗಲೂ ಸಾಂಪ್ರದಾಯಿಕ ಶೈಲಿಯ ವ್ಯಾಪ್ತಿಯಲ್ಲಿತ್ತು ಹಾಗೂ ಆ ದೇಶದಿಂದ ಅಣ್ವಸ್ತ್ರ ಪ್ರಯೋಗಿಸುವ ಸೂಚನೆ ಯಾವುದೇ ಎದುರಾಗಿರಲಿಲ್ಲ ಹಾಗೂ ಕದನವಿರಾಮ ಕುರಿತ ಮಾತುಕತೆಗೆ ಅಮೆರಿಕ ಮಧ್ಯಸ್ಥಿಕೆ ವಹಿಸಿರಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಂಘರ್ಷವನ್ನು ನಿಲ್ಲಿಸುವಲ್ಲಿ ತನ್ನ ಆಡಳಿತದ ಪಾತ್ರದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಮತ್ತೆ ಪ್ರತಿಪಾದಿಸುತ್ತಿರುವ ಕುರಿತಂತೆ ಪ್ರತಿಪಕ್ಷದ ಕೆಲವು ಸದಸ್ಯರು ಪ್ರಶ್ನೆ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ದ್ವಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂಬ ಸರಕಾರದ ನಿಲುವನ್ನು ಮಿಸ್ರಿ ಪುನರುಚ್ಚರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಹಲ್ಗಾಮ್ ದಾಳಿಯ ಉಗ್ರರು, ಪಾಕಿಸ್ತಾನದಲ್ಲಿರುವ ತಮ್ಮ ಮಾಸ್ಟರ್ ಮೈಂಡ್ಗಳ ಜೊತೆ ಸಂಪರ್ಕದಲ್ಲಿದ್ದುದು ತನಿಖೆಯಿಂ ಬೆಳಕಿಗೆ ಬಂದಿದೆ ಎಂದವರು ಹೇಳಿದರು.

ಸಂಘರ್ಷದ ಸಂದರ್ಭ ಪಾಕಿಸ್ತಾನ ಚೀನಾದ ಅಸ್ತ್ರಗಳನ್ನು ಬಳಸಿತ್ತೇ ಎಂದು ಕೆಲವು ಸಂಸದರು ಪ್ರಶ್ನಿಸಿದರು. ಇದಕ್ಕೆ ಮಿಸ್ರಿ ಅವರು, ಭಾರತ ಪಾಕಿಸ್ತಾನದ ವಾಯು ನೆಲೆಗಳನ್ನು ನೆಲಸಮಗೊಳಿಸಿತ್ತು. ಆದುದರಿಂದ ಅದು ಮುಖ್ಯವಲ್ಲ ಎಂದವರು ಹೇಳಿದ್ದಾಗಿ ಮೂಲಗಳು ಹೇಳಿವೆ.

ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಮಿಸ್ರಿ ಅವರನ್ನು ಟ್ರೋಲ್ ಮಾಡುತ್ತಿರುವುದನ್ನು ಸಮಿತಿಯ ಸದಸ್ಯರು ಸರ್ವಾನುಮತದಿಂದ ಖಂಡಿಸಿದರು. ಅಲ್ಲದೆ, ಅವರ ವೃತ್ತಿಪರ ನಡವಳಿಕೆಯನ್ನು ಪ್ರಶಂಸಿಸಿದರು ಎಂದು ಮೂಲಗಳು ತಿಳಿಸಿವೆ.

ಟರ್ಕಿಯ ಭಾರತ ವಿರೋಧಿ ನಿಲುವಿನ ಕುರಿತ ಪ್ರಶ್ನೆಗೆ ಮಿಸ್ರಿ ಅವರು, ಆ ದೇಶ ಸಾಂಪ್ರದಾಯಿಕವಾಗಿ ಭಾರತವನ್ನು ಬೆಂಬಲಿಸುತ್ತಿಲ್ಲ ಎಂದರು.

ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ವಹಿಸಿದ್ದರು. ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಕಾಂಗ್ರೆಸ್ ನ ರಾಜೀವ್ ಶುಕ್ಲಾ ಹಾಗೂ ದೀಪೇಂದರ್ ಹೂಡಾ, ಎಐಎಂಐಎಂನ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹಾಗೂ ಬಿಜೆಪಿಯ ಅಪರಾಜಿತ ಸಾರಂಗಿ ಹಾಗೂ ಅರುಣ್ ಗೋವಿಲ್ ಸೇರಿದಂತೆ ಹಲವು ಸಂಸದರು ಪಾಲ್ಗೊಂಡಿದ್ದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಶಸಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ’ ಹಾಗೂ ತರುವಾಯ ಉಭಯ ರಾಷ್ಟ್ರಗಳ ನಡುವಿನ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News