ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ತೆಲಂಗಾಣದ BRS ನಾಯಕ ಕೆ.ಟಿ.ರಾಮರಾವ್ ಗೆ ಆಯೋಗದ ನೋಟಿಸ್
ಕೆ.ಟಿ.ರಾಮರಾವ್ | Photo: PTI
ಹೊಸದಿಲ್ಲಿ: ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಚುನಾವಣಾ ಆಯೋಗವು ಶನಿವಾರ ರಾಜ್ಯದ ಸಚಿವ ಹಾಗೂ ಬಿಆರ್ ಎಸ್ ನಾಯಕ ಕೆ.ಟಿ.ರಾಮರಾವ್ ಅವರಿಗೆ ನೋಟಿಸ್ ಹೊರಡಿಸಿದೆ. ರಾವ್ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರರೂ ಆಗಿದ್ದಾರೆ.
ತೆಲಂಗಾಣದಲ್ಲಿ ನ.30ರಂದು ಚುನಾವಣೆ ನಡೆಯಲಿದ್ದು,ಡಿ.3ರಂದು ಮತಗಳ ಎಣಿಕೆ ನಡೆಯಲಿದೆ.
ರಾವ್ ಸರಕಾರಿ ಕಚೇರಿಯಾದ ಟಿ-ವರ್ಕ್ಸ್ ಗೆ ಭೇಟಿ ನೀಡಿದ್ದರು ಮತ್ತು ಅದನ್ನು ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಿ ಬಳಸಿಕೊಂಡಿದ್ದರು, ತನ್ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಣದೀಪ ಸುರ್ಜೆವಾಲಾ ದೂರಿನಲ್ಲಿ ಆರೋಪಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಕೆಸಿಆರ್ ಅವರಿಗೂ ನೋಟಿಸನ್ನು ನೀಡಿದ್ದ ಆಯೋಗವು ಮಾದರಿ ನೀತಿ ಸಂಹಿತೆಗೆ ಬದ್ಧರಾಗಿರುವಂತೆ ಆಗ್ರಹಿಸಿತ್ತು. ಅ.30ರಂದು ನಿಜಾಮಾಬಾದ್ ನಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಮುಖ್ಯಮಂತ್ರಿಗಳು ಅವಹೇಳನಕಾರಿ ಮತ್ತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ನ ವಿದ್ಯಾರ್ಥಿ ಘಟಕ ಎನ್ಎಸ್ಯುಐನ ತೆಲಂಗಾಣ ಅಧ್ಯಕ್ಷ ಬಲ್ಮೂರಿ ವೆಂಕಟ ನರಸಿಂಗ್ ರಾವ್ ಆರೋಪಿಸಿದ್ದರು.