×
Ad

'ಮತ ತಿನ್ನುವ' ಕಾರ್ಬೆಟ್ ಚಿರತೆಗಳು!

Update: 2024-04-11 09:31 IST

ಸಾಂದರ್ಭಿಕ ಚಿತ್ರ Photo: PTI

ಡೆಹ್ರಾಡೂನ್: ಉತ್ತರಾಖಂಡದ ನೈನಿತಾಲ್ ಮತ್ತು ಪೌರಿ ಜಿಲ್ಲೆಗಳ ರಮಣೀಯ ಪರಿಸರದ ಗ್ರಾಮಸ್ಥರು ಮಾತ್ರ ಕೋರ್ಬೆಟ್ ಹುಲಿ ರಕ್ಷಿತಾರಣ್ಯದಲ್ಲಿ ಮನುಷ್ಯ-ವನ್ಯಮೃಗಗಳ ಸಂಘರ್ಷವನ್ನು ಎದುರಿಸುತ್ತಿದ್ದಾರೆ.

ಗರ್ವಾಲ್ ಮತ್ತು ನೈನಿತಾಲ್-ಉಧಾಂ ಸಿಂಗ್ ನಗರ ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 19ರಂದು ಮತದಾನ ನಡೆಯಲಿದ್ದು, ಇದು ಮನುಷ್ಯ- ಚಿರತೆಗಳ ಸಂಘರ್ಷವನ್ನು ತೀವ್ರವಾಗಿ ಎದುರಿಸುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲಿ 2019ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಮತ ಸಮೀಪಿಸುತ್ತಿದ್ದಂತೆ ಜನರಿಗೆ ಇರುವ ಆಯ್ಕೆಗಳು ಎರಡು. ಒಂದು ಮತ ಚಲಾಯಿಸುವುದು, ಮತ್ತೊಂದು ಚುನಾವಣಾ ಬಹಿಷ್ಕಾರ. ಬಹಳಷ್ಟು ಮಂದಿ ನೋಟಾ ಚಲಾವಣೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಸರ್ಕಾರದ ಮಧ್ಯಪ್ರವೇಶದ ಕೊರತೆಯಿಂದಾಗಿ ಜನ ಹತಾಶರಾಗಿದ್ದಾರೆ.

"ಗ್ರಾಮಸ್ಥರಿಗೆ ತಮ್ಮ ಮತ ಚಲಾಯಿಸುವ ಅಥವಾ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹುಮ್ಮಸ್ಸು ಇಲ್ಲ. ನಮ್ಮ ಸಂಸದರು ಅಥವಾ ಶಾಸಕರು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ" ಎಂದು ಸಂಯುಕ್ತ ಸಂಘರ್ಷ ಸಮಿತಿಯ ಸಂಚಾಲಕ ಲಲಿತ್ ಉಪ್ರೇತಿ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಹುಲಿ ಹಾಗೂ ಚಿರತೆಗಳು 264 ಮಂದಿಯ ಜೀವ ಬಲಿ ಪಡೆದಿವೆ. ಚಿರತೆ ದಾಳಿಯಿಂದ 203 ಮಂದಿ ಜೀವ ಕಳೆದುಕೊಂಡಿದ್ದರೆ, ಹುಲಿಕಾಟಕ್ಕೆ 61 ಮಂದಿ ಬಲಿಯಾಗಿದ್ದಾರೆ. ವನ್ಯಮೃಗಗಳು ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಶಾಲೆಗಳನ್ನು ಮುಚ್ಚಿದ ನಿದರ್ಶನಗಳೂ ಇವೆ. ಇದು ಸಾವಲದೇಹ್, ಪತ್ರಾಣಿ, ಧೇಲಾ ಮತ್ತು ಪೌರಿಯಂಥ ಕಡೆಗಳಲ್ಲಿ ಗ್ರಾಮಸ್ಥರ ಪ್ರತಿಭಟನೆಗಳಿಗೂ ಕಾರಣವಾಗಿದೆ.

2022ರಲ್ಲಿ ತೆಹ್ರಿ ಗ್ರಾಮಸ್ಥರು ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಪೌರಿಯಲ್ಲೂ ಜನ ಇದೇ ನಿರ್ಧಾರ ಕೈಗೊಂಡಿದ್ದರು.

ಜನರನ್ನು ಒಕ್ಕಲೆಬ್ಬಿಸುವ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದ್ದು, ಇದರ ವಿರುದ್ಧ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಕೂಡಾ ಮನವಿ ಮಾಡಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನೇ ಬದಲಿಸಬೇಕು ಎಂದು ಕೆಲವರು ಆಗ್ರಹಿಸಿದ್ದರೆ, ಚಿರತೆಗಳಿಗೆ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳು ಎಂಬ ಸ್ಥಾನಮಾನವನ್ನು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News