×
Ad

ಬಿಜೆಪಿ ಸೇರಿದರೆ ಎಲ್ಲ ಪ್ರಕರಣಗಳನ್ನು ಕೈಬಿಡುವ ಆಮಿಷ ಒಡ್ಡಲಾಗಿತ್ತು: ಮುಹಮ್ಮದ್ ಝುಬೇರ್ ಆರೋಪ

Update: 2023-11-16 22:51 IST

ಮುಹಮ್ಮದ್ ಝಬೇರ್ , Photo : muslimmirror.com

ಬೆಂಗಳೂರು : ನಾನು ಜೈಲಿನಲ್ಲಿದ್ದಾಗ, ನಾನೇನಾದರೂ ಬಿಜೆಪಿ ಸೇರ್ಪಡೆಯಾದರೆ, ನನ್ನ ವಿರುದ್ಧದ ಎಲ್ಲ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಆಮಿಷ ಒಡ್ಡಲಾಗಿತ್ತು ಎಂದು ಸತ್ಯ ಶೋಧಕ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝಬೇರ್ ಆರೋಪಿಸಿದ್ದಾರೆ.

ಜೈಲಿನಲ್ಲಿನ ಸಹ ಕೈದಿಯೊಂದಿಗಿನ ಮಾತುಕತೆಯನ್ನು x ಸಾಮಾಜಿಕ ಮಾಧ್ಯಮದಲ್ಲಿ ಸ್ಮರಿಸಿಕೊಂಡಿರುವ ಝುಬೇರ್, ಆ ಸಹ ಕೈದಿಯು ಮಾಜಿ ಶಿವಸೇನಾ ಸದಸ್ಯನಾಗಿದ್ದು, ಇದೀಗ ಬಿಜೆಪಿ ಬೆಂಬಲಿಗನಾಗಿದ್ದಾನೆ. ನಿಮ್ಮ ಹಾಗೂ ಕುಟುಂಬದ ಬಗ್ಗೆ ಯೋಚಿಸಿರಿ ಎಂದು ಸಲಹೆ ನೀಡಿದ ಆತ, ನೀವೇನಾದರೂ ಬಿಜೆಪಿ ಸೇರ್ಪಡೆಯಾದರೆ, ಬಿಜೆಪಿಯು ನಿಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಳ್ಳುತ್ತದೆ ಎಂದೂ ಕಿವಿಮಾತು ಹೇಳಿದ್ದ ಎಂದು ಬರೆದುಕೊಂಡಿದ್ದಾರೆ.

"ನಿಮ್ಮ ವಿರುದ್ಧದ ಎಲ್ಲ ಸುಳ್ಳು ಪ್ರಕರಣಗಳನ್ನು ಕ್ಷಣಾರ್ಧದಲ್ಲಿ ಕೈಬಿಡಲಾಗುತ್ತದೆ. ಪಕ್ಷದ ನಾಯಕತ್ವ ನಿಮ್ಮನ್ನು ಸ್ವಾಗತಿಸುತ್ತದೆ. ನಿಮ್ಮನ್ನು ನಿಂದಿಸುತ್ತಿರುವ ಪಕ್ಷದ ಬೆಂಬಲಿಗರೆಲ್ಲ ನಿಮ್ಮನ್ನು ಪ್ರಶಂಸಿಸಲು ಪ್ರಾರಂಭಿಸುತ್ತಾರೆ. ನೀವು ಸಾಕಷ್ಟು ಹಣ ಮತ್ತು ಗೌರವವನ್ನು ಪಡೆಯಲಿದ್ದೀರಿ ಎಂದು ಸಹ ಕೈದಿಯು ನನಗೆ ತಿಳಿಸಿದ್ದ" ಎಂದು ಝುಬೇರ್ ಸ್ಮರಿಸಿಕೊಂಡಿದ್ದಾರೆ.

"ಸ್ಮಿತಾ ಪ್ರಕಾಶ್ ಪಾಡ್‌ಕಾಸ್ಟ್ ನೋಡಿದಾಗ ಜೈಲಿನೊಳಗಿನ ನಮ್ಮ ಮಾತುಕತೆಯು ನೆನಪಾಯಿತು" ಎಂದೂ ಝುಬೇರ್ ಹೇಳಿಕೊಂಡಿದ್ದಾರೆ. ಆ ಮೂಲಕ, ಒಂದು ಕಾಲದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾರ ಉಗ್ರ ವಿರೋಧಿಯಾಗಿದ್ದ ಜೆಎನ್‌ಯು ವಿದ್ಯಾರ್ಥಿ ನಾಯಕಿ‌ ಶೆಹ್ಲಾ ರಶೀದ್‌ರ ಇತ್ತೀಚಿನ ಎಎನ್‌ಐ ಪಾಡ್‌ಕಾಸ್ಟ್ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

ಶೆಹ್ಲಾ ರಶೀದ್ ಅವರು ದಿಢೀರನೆ ಬಿಜೆಪಿಯೊಂದಿಗೆ ಕೈಜೋಡಿಸುವ ಮನಃಪರಿವರ್ತನೆ ಕುರಿತು ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸುತ್ತಿರುವ ಹೊತ್ತಿನಲ್ಲಿ ಮುಹಮ್ಮದ್ ಝುಬೇರ್ ಮಾಡಿರುವ ಮಾರ್ಮಿಕ ಪೋಸ್ಟ್ ಹೆಚ್ಚು ಗಮನ ಸೆಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News