×
Ad

ವಯನಾಡ್ ಭೂಕುಸಿತ | ಕಾಣೆಯಾಗಿರುವವರನ್ನು ಗುರುತಿಸಲು ಡಿಎನ್ಎ, ಪಡಿತರ ಚೀಟಿ ವಿವರಗಳ ಸಂಗ್ರಹ

Update: 2024-08-05 20:55 IST

PC : PTI 

ವಯನಾಡ್ : ಜಿಲ್ಲೆಯ ಮುಂಡಕ್ಕೈ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಜನರನ್ನು ಗುರುತಿಸಲು ಮುಂದಾಗಿರುವ ಕೇರಳ ಸರಕಾರವು ಡಿಎನ್ಎ ಪರೀಕ್ಷೆಗಾಗಿ ಬದುಕುಳಿದವರು ಮತ್ತು ಸಂಬಂಧಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿದೆ.

ಕಾಣೆಯಾಗಿರುವ ವ್ಯಕ್ತಿಗಳನ್ನು ಗುರುತಿಸಲು ಆರೋಗ್ಯ ಇಲಾಖೆಯು ಡಿಎನ್ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹ ಕಾರ್ಯವನ್ನು ಆರಂಭಿಸಿದ್ದರೆ ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿಗಳು,ಆಧಾರ್ ಸಂಖ್ಯೆ ಮತ್ತು ಜೋಡಣೆಗೊಂಡ ಮೊಬೈಲ್ ಸಂಖ್ಯೆಗಳ ವಿವರಗಳನ್ನು ಸಂಗ್ರಹಿಸುತ್ತಿದೆ.

ಇನ್ನೂ ಗುರುತಿಸಲಾಗಿರದ ಮೃತದೇಹಗಳು ಮತ್ತು ಅಂಗಾಂಗಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಾಗಿ ರಕ್ತಸಂಬಂಧಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಮೊದಲ ಹಂತದಲ್ಲಿ ಗುರುತು ಪತ್ತೆಯಾಗಿರದ ಮೃತದೇಹಗಳಿಂದ ಡಿಎನ್ಎ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಬದುಕುಳಿದವರ ಮತ್ತು ಸಂಬಂಧಿಗಳ ಸ್ಯಾಂಪಲ್ಗಳೊಂದಿಗೆ ತಾಳೆ ಹಾಕಲಾಗುವುದು ಎಂದು ಆರೋಗ್ಯ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

ಆಪ್ತ ಸಮಾಲೋಚನೆಯ ಬಳಿಕ ಬದುಕುಳಿದವರು ಮತ್ತು ಸಂಬಂಧಿಗಳಿಂದ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ನಾಗರಿಕ ಪೂರೈಕೆ ಇಲಾಖೆಯು ಕಾಣೆಯಾಗಿರುವವರ ಪತ್ತೆಗಾಗಿ ಪಂಚಾಯತ್ ಅಧಿಕಾರಿಗಳಿಗೆ ವಿವರಗಳನ್ನು ಒದಗಿಸಿದೆ ಎಂದು ಹೇಳಿಕೆಯು ತಿಳಿಸಿದೆ.

ಈ ನಡುವೆ ಕೇರಳದ ಕಂದಾಯ ಸಚಿವ ಕೆ.ರಾಜನ್ ಅವರು, ಈವರೆಗೆ 221 ಶವಗಳು ಮತ್ತು 166 ಅಂಗಾಂಗಗಳನ್ನು ಹೊರತೆಗೆಯಲಾಗಿದೆ. ಕಾಣೆಯಾಗಿರುವವರ ಪೈಕಿ ಕೆಲವರನ್ನು ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾದ ಬಳಿಕ ಅಂತಹವರ ಸಂಖ್ಯೆ 206ರಿಂದ 180ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News