×
Ad

ವಯನಾಡ್ ಭೂಕುಸಿತದ ದುಸ್ವಪ್ನ| ವೈರಲ್ ಆದ ಡ್ರೋನ್ ದೃಶ್ಯಗಳು

Update: 2024-07-30 19:15 IST

PC : PTI 

ವಯನಾಡ್ : ಭಾರಿ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ತ್ರಿವಳಿ ಭೂ ಕುಸಿತ ಸಂಭವಿಸಿದ್ದು, ಈ ಭೂ ಕುಸಿತದ ಡ್ರೋನ್ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಮಂಗಳವಾರ ಮುಂಜಾನೆ ಸಂಭವಿಸಿದ ಭೂ ಕುಸಿತದಲ್ಲಿ ಮುಂಡಕ್ಕೈ, ಚೂರಲ್ ಮಾಲಾ, ಅಟ್ಟಮಲ ಹಾಗೂ ನೂಲ್ ಪುಳ ಗ್ರಾಮಗಳು ತೀವ್ರ ಹಾನಿಗೀಡಾಗಿವೆ. ಈ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿರುವುದರಿಂದ, ಹೊರ ಜಗತ್ತಿನ ಸಂಪರ್ಕ ಕಡಿತಗೊಂಡಿದೆ.

ಕೇರಳದ ಗಿರಿ ಶ್ರೇಣಿ ಜಿಲ್ಲೆಯಾದ ವಯನಾಡ್ ನಲ್ಲಿ ಸಂಭವಿಸಿರುವ ಈ ಭೀಕರ ಭೂ ಕುಸಿತದಲ್ಲಿ ಇಲ್ಲಿಯವರೆಗೆ 63 ಮಂದಿ ಮೃತಪಟ್ಟಿದ್ದು, 116ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಸಂತ್ರಸ್ತರು ನಿದ್ರಾವಸ್ಥೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದು, ನೆರವಿಗಾಗಿ ಸ್ಥಳೀಯರು ಮೊರೆ ಇಡುತ್ತಿದ್ದಾರೆ. ದಿನವಿಡೀ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ರಕ್ಷಣಾ ಪಡೆಗಳು, ಮಣ್ಣಿನಡಿ ಹೂತು ಹೋಗಿರುವವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಭರದಿಂದ ನಡೆಸುತ್ತಿವೆ.

ಕೇರಳ ಕಂದಾಯ ಇಲಾಖೆಯ ಪ್ರಕಾರ, 12 ಮಂದಿ ಕಲ್ಪೆಟ್ಟ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 77 ಮಂದಿಗೆ ವಯನಾಡ್ ನ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕೃತ ವರದಿಯ ಪ್ರಕಾರ, ವಿಮ್ಸ್ ನಲ್ಲಿ ಎಂಟು ಸಾವು ಸಂಭವಿಸಿದ್ದರೆ, ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವೈತಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 27 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬ್ಯಾತೆರಿ ತಾಲ್ಲೂಕು ಆಸ್ಪತ್ರೆಯಲ್ಲಿ ಒಟ್ಟು 35 ಮಂದಿ ಮೃತಪಟ್ಟಿದ್ದು, 27 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News