ಪೌರತ್ವದ ಪುರಾವೆಯಿದ್ದರೂ ಬಾಂಗ್ಲಾದೇಶದೊಳಗೆ ತಳ್ಳಲ್ಪಟ್ಟ ಪಶ್ಚಿಮ ಬಂಗಾಳದ ಕಾರ್ಮಿಕ: ವರದಿ
ಸಾಂದರ್ಭಿಕ ಚಿತ್ರ | PTI
ಕೋಲ್ಕತಾ: ಅಕ್ರಮ ಬಾಂಗ್ಲಾದೇಶಿ ವಲಸಿಗನೆಂಬ ಶಂಕೆಯಿಂದ ಥಾಣೆ ಪೋಲಿಸರು ಬಂಧಿಸಿದ್ದ ಕಾರ್ಮಿಕನನ್ನು ಗಡಿರಕ್ಷಣಾ ಪಡೆ(ಬಿಎಸ್‌ಎಫ್)ಯು ರವಿವಾರ ನಸುಕಿನಲ್ಲಿ ಬಾಂಗ್ಲಾದೇಶದ ಗಡಿಯೊಳಕ್ಕೆ ತಳ್ಳಿದೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಮೆಹಬೂಬ್ ಶೇಖ್(36) ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ. ಪಶ್ಚಿಮ ಬಂಗಾಳ ಸರಕಾರದ ಪ್ರಕಾರ ರಾಜ್ಯದ ಪೋಲಿಸರು ಮತ್ತು ರಾಜ್ಯ ವಲಸಿಗ ಕಲ್ಯಾಣ ಮಂಡಳಿ ಮಧ್ಯಪ್ರವೇಶಿಸಿ ಶೇಖ್‌ನ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಮಹಾರಾಷ್ಟ್ರ ಪೋಲಿಸರು ಮತ್ತು ಬಿಎಸ್‌ಎಫ್ ಆತನನ್ನು ಬಾಂಗ್ಲಾದೇಶದ ಗಡಿಯೊಳಗೆ ತಳ್ಳಿದ್ದಾರೆ.
‘ಶೇಖ್ ಕುಟುಂಬವು ನಮಗೆ ಮಾಹಿತಿ ನೀಡಿದ ಬಳಿಕ ನಾವು ಮಹಾರಾಷ್ಟ್ರ ಪೋಲಿಸರನ್ನು ಸಂಪರ್ಕಿಸಿ ಎಲ್ಲ ಅಗತ್ಯ ದಾಖಲೆಗಳನ್ನು ಅವರಿಗೆ ಕಳುಹಿಸಿದ್ದೆವು. ಅವರು ಪಶ್ಚಿಮ ಬಂಗಾಳ ಸರಕಾರಕ್ಕೆ ಮಾಹಿತಿಯನ್ನು ನೀಡುವ ಗೋಜಿಗೂ ಹೋಗಿರಲಿಲ್ಲ ಮತ್ತು ಬಿಎಸ್‌ಎಫ್ ಶೇಖ್‌ನನ್ನು ಬಾಂಗ್ಲಾದೇಶದೊಳಗೆ ತಳ್ಳಿದೆ ’ಎಂದು ಪಶ್ಚಿಮ ಬಂಗಾಳ ವಲಸಿಗ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮೀರುಲ್ ಇಸ್ಲಾಮ್ indianexpress.comಗೆ ತಿಳಿಸಿದರು.
ಶೇಖ್ ಕುಟುಂಬವು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾಗಬಂಗೋಲಾದ ಮಹಿಸಾಸ್ಥಲಿ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿದೆ.
‘ಕಳೆದೆರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ನನ್ನ ಸೋದರ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ವಾಸವಾಗಿದ್ದ. ಜೂ.11ರಂದು ಆತ ಚಹಾ ಕುಡಿಯುತ್ತಿದ್ದಾಗ ಪೋಲಿಸರು ಬಾಂಗ್ಲಾದೇಶಿ ಎಂದು ಶಂಕಿಸಿ ಕನಕಿಯಾ ಠಾಣೆಗೆ ಒಯ್ದಿದ್ದರು. ಆತ ಠಾಣೆಯಿಂದಲೇ ನಮಗೆ ದೂರವಾಣಿ ಕರೆ ಮಾಡಿದ್ದ. ನಾವು ತಕ್ಷಣ ಸ್ಥಳೀಯ ಪೋಲಿಸರು ಮತ್ತು ಆಡಳಿತ,ನಮ್ಮ ಪಂಚಾಯತ್ ಪ್ರಧಾನ ಮತ್ತು ವಲಸಿಗ ಕಲ್ಯಾಣ ಮಂಡಳಿಗೆ ಮಾಹಿತಿ ನೀಡಿದ್ದೆವು. ಶುಕ್ರವಾರದ ವೇಳೆಗೆ ನಾವು ಆತನ ಮತದಾರರ ಗುರುತಿನ ಚೀಟಿ,ಆಧಾರ್ ಕಾರ್ಡ್,ಪಡಿತರ ಚೀಟಿ ಮತ್ತು ಪಂಚಾಯತ್ ಪ್ರಮಾಣೀಕರಿಸಿದ್ದ ತಲೆಮಾರುಗಳ ನಮ್ಮ ವಂಶವೃಕ್ಷ ಸೇರಿದಂತೆ ಎಲ್ಲ ದಾಖಲೆಗಳನ್ನು ಮಹಾರಾಷ್ಟ್ರ ಪೋಲಿಸರಿಗೆ ಕಳುಹಿಸಿದ್ದೆವು ಎಂದು ಶೇಖ್‌ನ ಕಿರಿಯ ಸಹೋದರ ಮುಜೀಬುರ್ ಸುದ್ದಿಸಂಸ್ಥೆಗೆ ತಿಳಿಸಿದರು.
ಶೇಖ್‌ಗೆ ನೆರವಾಗಲು ಕೆಲವು ಗ್ರಾಮಸ್ಥರು ಸಿಲಿಗುರಿಯಲ್ಲಿನ ಬಿಎಸ್‌ಎಫ್ ಶಿಬಿರಕ್ಕೂ ತೆರಳಿದ್ದರು. ಆದರೆ ಅವರನ್ನು ಒಳಕ್ಕೂ ಬಿಟ್ಟಿರಲಿಲ್ಲ,ಅವರ ಅಹವಾಲನ್ನೂ ಆಲಿಸಿರಲಿಲ್ಲ ಎಂದು ಆರೋಪಿಸಲಾಗಿದೆ.
ಶೇಖ್ ತನ್ನ ಪೌರತ್ವವನ್ನು ಸಾಬೀತುಗೊಳಿಸಲು ದಾಖಲೆಗಳನ್ನು ನೀಡುವಲ್ಲಿ ವಿಫಲನಾಗಿದ್ದ,ತಾವು ಪೌರತ್ವದ ಪುರಾವೆಯಾಗಿ ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ಹಳ್ಳಿಯೊಂದರಲ್ಲಿ ಆಶ್ರಯ ಪಡೆದಿರುವ ಶೇಖ್ ಶನಿವಾರ ಬೆಳಿಗ್ಗೆ ಕುಟುಂಬಕ್ಕೆ ಕರೆ ಮಾಡಿ ನಸುಕಿನ 3:30ಕ್ಕೆ ತನ್ನನ್ನು ಬಾಂಗ್ಲಾದೇಶಗೊಳಗೆ ತಳ್ಳಲಾಗಿದೆ ಎಂದು ತಿಳಿಸಿದ್ದ.
‘ಆತ ಆಗ ಅಳುತ್ತಿದ್ದ. ಆತನಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ನಮಗೆ ಆತ ಮರಳಬೇಕು ಅಷ್ಟೇ. ಬಾಂಗ್ಲಾದೇಶದಲ್ಲಿ ಆತ ಹೇಗೆ ಬದುಕುತ್ತಾನೆ ಎನ್ನುವುದು ನಮಗೆ ಗೊತ್ತಿಲ್ಲ’ ಎಂದು ಮುಜೀಬುರ್ ಹೇಳಿದರು.