×
Ad

“ನಾವು ಸ್ಥಳಾಂತರಗೊಳ್ಳಲು ಸಿದ್ಧ”: ಮುಖ್ಯ ನ್ಯಾಯಾಧೀಶರ ಅಧಿಕೃತ ನಿವಾಸದ ವಿವಾದದ ಕುರಿತು ಮಾಜಿ ಸಿಜೆಐ ಡಿ.ವೈ.ಚಂದ್ರಚೂಡ್ ಸ್ಪಷ್ಟನೆ

Update: 2025-07-07 13:12 IST

ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ (Photo: PTI)

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರು ಮುಖ್ಯ ನ್ಯಾಯಾಧೀಶರಿಗೆ ನೀಡಲಾಗುವ ಅಧಿಕೃತ ನಿವಾಸವನ್ನು ತೆರವುಗೊಳಿಸುತ್ತಿಲ್ಲ ಎಂಬ ವಿವಾದಕ್ಕೆ ಸಂಬಂಧಿಸಿ ಇದೀಗ ಅವರು ಸ್ಪಷ್ಟನೆ ನೀಡಿದ್ದಾರೆ. ದಿಲ್ಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಮನೆ ಸಂಖ್ಯೆ 5ರ ಮುಖ್ಯ ನ್ಯಾಯಾಧೀಶರ ಬಂಗಲೆಯನ್ನು ತೆರವುಗೊಳಿಸುವಲ್ಲಿ ತಮ್ಮ ಕಡೆಯಿಂದ ಯಾವುದೇ ಬಗೆಯ ವಿಳಂಬವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಸ್ಪಷ್ಟಪಡಿಸಿರುವುದಾಗಿ Bar and Bench ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂದಿನ ಎರಡು ವಾರಗಳಲ್ಲಿ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಮುಖ್ಯ ನ್ಯಾಯಾಧೀಶರ ಬಂಗಲೆಯಿಂದ ಸ್ಥಳಾಂತರಗೊಳ್ಳಲಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ನವೆಂಬರ್, 2024ರಲ್ಲಿ ನಿವೃತ್ತರಾದ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರು ತೀನ್ ಮೂರ್ತಿ ಮಾರ್ಗದಲ್ಲಿ ಸರಕಾರ ಮಂಜೂರು ಮಾಡಿರುವ ಸರಕಾರಿ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ಈ ನಿವಾಸದಲ್ಲಿ ತಮ್ಮ ನಿವೃತ್ತಿಯ ನಂತರ ಆರು ತಿಂಗಳ ಕಾಲ ವಾಸಿಸುವ ಅರ್ಹತೆ ಹೊಂದಿದ್ದಾರೆ.

ತಾನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ, ತಮ್ಮ ಮಕ್ಕಳು ಅಪರೂಪದ ವೈದ್ಯಕೀಯ ಪರಿಸ್ಥಿತಿಗೆ ಈಡಾಗಿರುವುದರಿಂದ, ಕೃಷ್ಣ ಮೆನನ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸುವಲ್ಲಿ ವಿಳಂಬವಾಯಿತು ಎಂದು ಡಿ.ವೈ.ಚಂದ್ರಚೂಡ್ ಸ್ಪಷ್ಟನೆ ನೀಡಿದ್ದರು.

ನ್ಯಾ. ಡಿ.ವೈ.ಚಂದ್ರಚೂಡ್ ಹಾಗೂ ಅವರ ಪತ್ನಿ ಕಲ್ಪನಾ ದಾಸ್ ಅವರು ಪ್ರಿಯಾಂಕಾ ಹಾಗೂ ಮಾಹಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದು, ಅವರಿಬ್ಬರೂ ನೆಮಲೈನ್ ಮಯೋಪತಿ ಎಂಬ ಅಪರೂಪದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಪರೂಪದ ವಂಶಾವಳಿ ಸಮಸ್ಯೆಯಿಂದ ತಮ್ಮ ಕುಟುಂಬ ಎದುರಿಸುತ್ತಿರುವ ಸವಾಲುಗಳ ಕುರಿತು ನ್ಯಾ. ಡಿ.ವೈ.ಚಂದ್ರಚೂಡ್ ಅವರು ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದರು.

ಆದರೆ, ಹಲವು ಬಾರಿಯ ವಿಸ್ತರಣೆಯ ನಂತರ, ಇದೀಗ ಕೃಷ್ಣ ಮೆನನ್ ಮಾರ್ಗದಲ್ಲಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಅಧಿಕೃತ ಬಂಗಲೆಯನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರಿಗೆ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನ್ಯಾ. ಡಿ.ವೈ.ಚಂದ್ರಚೂಡ್ ಅವರಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News