“ನಮ್ಮ ಕೈಗಳಿಗೆ ಕೋಳಗಳನ್ನು ಮತ್ತು ಕಾಲುಗಳಿಗೆ ಸಂಕೋಲೆಯನ್ನು ತೊಡಿಸಲಾಗಿತ್ತು”
Photo : x/@USBPChief
ಹೊಸದಿಲ್ಲಿ: ಹರ್ವಿಂದರ್ ಸಿಂಗ್ ಅವರ ಭಾರತಕ್ಕೆ ವಾಪಸಾತಿ ಸಂಕೋಲೆಗಳಲ್ಲಿ 40 ಗಂಟೆಗಳ ಸಂಕಷ್ಟದಿಂದ ಕೂಡಿತ್ತು. ಅವರು ಅಮೆರಿಕದಿಂದ ಗಡಿಪಾರುಗೊಂಡು ಬುಧವಾರ ಯುಎಸ್ ಮಿಲಿಟರಿ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ 104 ಅಕ್ರಮ ಭಾರತೀಯ ವಲಸಿಗರ ಮೊದಲ ತಂಡದಲ್ಲಿ ಒಬ್ಬರಾಗಿದ್ದರು.
ಪಂಜಾಬಿನ ಹೋಷಿಯಾರ್ಪುರದ ತಹ್ಲಿ ಗ್ರಾಮದ ನಿವಾಸಿ ಸಿಂಗ್(40) ಸ್ವದೇಶಕ್ಕೆ ತನ್ನ ಮರುಪ್ರಯಾಣದ ಅನುಭವವು ನರಕಕ್ಕಿಂತಲೂ ಕೆಟ್ಟದಾಗಿತ್ತು ಎಂದು ಸುದ್ದಿಸಂಸ್ಥೆಗೆ ತಿಳಿಸಿದರು. ‘ನನ್ನೊಂದಿಗೆ ವಿಮಾನದಲ್ಲಿದ್ದ ಎಲ್ಲರ ಕೈಗಳಿಗೆ ಕೋಳಗಳನ್ನು ಮತ್ತು ಕಾಲುಗಳಿಗೆ ಸಂಕೋಲೆಗಳನ್ನು ತೊಡಿಸಲಾಗಿತ್ತು ಮತ್ತು ಪ್ರಯಾಣದುದ್ದಕ್ಕೂ ಆಸನಗಳಲ್ಲಿಯೇ ಕುಳಿತಿರುವಂತೆ ಮಾಡಲಾಗಿತ್ತು. ಪದೇ ಪದೇ ವಿನಂತಿಸಿಕೊಂಡ ಬಳಿಕ ನಮಗೆ ವಾಷ್ರೂಂ ಗೆ ತೆರಳಲು ಅನುಮತಿ ನೀಡಲಾಗಿತ್ತು ಮತ್ತು ನಾವು ಕಾಲುಗಳನ್ನು ಎಳೆದುಕೊಂಡೇ ಹೋಗುವಂತಾಗಿತ್ತು. ಸಿಬ್ಬಂದಿಗಳು ಬಾಗಿಲು ತೆರೆದು ನಮ್ಮನ್ನು ಒಳಕ್ಕೆ ತಳ್ಳುತ್ತಿದ್ದರು’ ಎಂದು ಅವರು ಹೇಳಿದರು.
ಆಹಾರವು ಇನ್ನೊಂದು ಸಮಸ್ಯೆಯಾಗಿತ್ತು,ಕೋಳಗಳಿದ್ದ ಕೈಗಳಿಂದಲೇ ಅವರು ಊಟ ಮಾಡುವಂತಾಗಿತ್ತು ಮತ್ತು ಅವುಗಳನ್ನು ತೆಗೆಯುವಂತೆ ಮಾಡಿಕೊಂಡಿದ್ದ ಮನವಿಗಳು ವ್ಯರ್ಥವಾಗಿದ್ದವು.
‘ಪ್ರಯಾಣದಲ್ಲಿ ದೈಹಿಕ ನೋವು ಮಾತ್ರವಲ್ಲ,ಮಾನಸಿಕವಾಗಿಯೂ ನಾವು ದಣಿದಿದ್ದೆವು’ ಎಂದು ಸಿಂಗ್ ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವೀಡಿಯೊಗಳು ಮತ್ತು ವರದಿಗಳು ಹರಿದಾಡಿದ ಬಳಿಕ ಅಮೆರಿಕದ ಗಡಿ ಗಸ್ತು ಪಡೆಯು 104 ಭಾರತೀಯರನ್ನು ನಿಜಕ್ಕೂ ಕೈಕೋಳ ಮತ್ತು ಸಂಕೋಲೆಗಳನ್ನು ತೊಡಿಸಿ ಗಡಿಪಾರು ಮಾಡಿದ್ದನ್ನು ದೃಢಪಡಿಸಿದೆ.
ಗಡಿ ಗಸ್ತು ಪಡೆಯ ಮುಖ್ಯಸ್ಥ ಮೈಕೆಲ್ ಡಬ್ಲ್ಯು. ಬ್ಯಾಂಕ್ಸ್ ಹಂಚಿಕೊಂಡಿರುವ ವೀಡಿಯೊ ತುಣುಕು ಗಡಿಪಾರುಗೊಂಡವರು ಕೈಕೋಳಗಳು ಮತ್ತು ಸಂಕೋಲೆಗಳೊಂದಿಗೆ ವಿಮಾನವನ್ನು ಹತ್ತುತ್ತಿರುವುದನ್ನು ತೋರಿಸಿದೆ. ವಲಸೆ ಕಾನೂನುಗಳ ಅನುಷ್ಠಾನಕ್ಕೆ ಅಮೆರಿಕದ ಬದ್ಧತೆಯನ್ನು ಎತ್ತಿ ತೋರಿಸಿರುವ ಬ್ಯಾಂಕ್ಸ್, ‘ನೀವು ಅಕ್ರಮವಾಗಿ ಗಡಿ ದಾಟಿದ್ದರಿಂದ ನಿಮ್ಮನ್ನು ದೇಶದಿಂದ ಹೊರಹಾಕಲಾಗುತ್ತದೆ’ ಎಂದು ಹೇಳಿದ್ದಾರೆ.
ಜೂನ್ 2024ರಲ್ಲಿ ಸಿಂಗ್ ಮತ್ತು ಅವರ ಪತ್ನಿ ಕುಲ್ಜಿಂದರ್ ಕೌರ್ ತಮ್ಮ ಜೀವನವನ್ನು ಬದಲಿಸುವ ಅಪಾಯವನ್ನು ಆಹ್ವಾನಿಸಿದ್ದರು. ಹೈನುಗಾರಿಕೆ ಮಾಡಿಕೊಂಡು ಜೀವನವನ್ನು ಸಾಗಿಸಲು ಕಷ್ಟಪಡುತ್ತಿದ್ದ ಅವರಿಗೆ ಏಜೆಂಟ್ನೂ ಆಗಿದ್ದ ಸಂಬಂಧಿಯೋರ್ವ ಕಾನೂನುಬದ್ಧವಾಗಿ ಅಮೆರಿಕಕ್ಕೆ ಕಳುಹಿಸುವುದಾಗಿ ನಂಬಿಸಿದ್ದ. ಅದಕ್ಕಾಗಿ 42 ಲಕ್ಷ ರೂ.ವೆಚ್ಚವಾಗಿತ್ತು. ಈ ಹಣವನ್ನು ಹೊಂಚಿಕೊಳ್ಳಲು ಸಿಂಗ್ ಕುಟುಂಬವು ತಮ್ಮ ಏಕೈಕ ಎಕರೆ ಭೂಮಿಯನ್ನು ಅಡವಿಟ್ಟು ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಪಡೆದಿದ್ದರು.
ಅಮೆರಿಕವನ್ನು ತಲುಪುವ ಬದಲು ಸಿಂಗ್ ಹಲವಾರು ತಿಂಗಳುಗಳ ಕಾಲ ಅಮಾನವೀಯ ಪರಿಸ್ಥಿತಿಗಳ ನಡುವೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸ್ಥಳಾಂತರಗೊಳ್ಳುತ್ತಲೇ ಇದ್ದರು.
ಚದುರಂಗದ ಕಾಯಿಯಂತೆ ಅವರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಕೌರ್ ತಿಳಿಸಿದರು.
ಎಲ್ಲ ಕಷ್ಟಗಳ ನಡುವೆಯೂ ತನ್ನ ಸಂಕಷ್ಟವನ್ನು ವೀಡಿಯೊದಲ್ಲಿ ದಾಖಲಿಸಿದ್ದ ಸಿಂಗ್ ಅದನ್ನು ಪತ್ನಿಗೆ ಕಳುಹಿಸಿದ್ದರು. ಕೌರ್ಗೆ ಜನವರಿಯಲ್ಲಿ ಅವರನ್ನು ಕೊನೆಯ ಬಾರಿಗೆ ಸಂಪರ್ಕಿಸಲು ಸಾಧ್ಯವಾಗಿತ್ತು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28
USBP and partners successfully returned illegal aliens to India, marking the farthest deportation flight yet using military transport. This mission underscores our commitment to enforcing immigration laws and ensuring swift removals.
— Chief Michael W. Banks (@USBPChief) February 5, 2025
If you cross illegally, you will be removed. pic.twitter.com/WW4OWYzWOf