ಇವಿಎಂ ಮೂಲಕವೇ ಗೆದ್ದು, ಇವಿಎಂ ತೆಗೆದು ಹಾಕುತ್ತೇವೆ: ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ | PC : PTI
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷವು 80 ಸ್ಥಾನ ಗೆದ್ದರೂ ನನಗೆ ಇವಿಎಂ ಮೇಲೆ ಯಾವುದೇ ವಿಶ್ವಾಸ ಮೂಡುವುದಿಲ್ಲ. ಇವಿಎಂ ಮೂಲಕವೇ ಗೆದ್ದು, ಇವಿಎಂ ತೆಗೆದು ಹಾಕುತ್ತೇವೆ ಎಂದು ನಾನು ಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ್ದೆ. ಇವಿಎಂ ವಿಷಯವು ಇಲ್ಲವಾಗಿಲ್ಲ. ಇವಿಎಂ ಅನ್ನು ತೆಗೆದು ಹಾಕುವವರೆಗೂ ಸಮಾಜವಾದಿ ಪಕ್ಷದ ಕಾರ್ಯಕರ್ತರು ತಮ್ಮ ಬೇಡಿಕೆಗೆ ಅಂಟಿಕೊಂಡಿರುತ್ತಾರೆ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
ಇಂದು ಲೋಕಸಭಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು ಪ್ರಶ್ನೆಗಳಿವೆ ಎಂದು ಗಂಭೀರ ಆರೋಪ ಮಾಡಿದರು. ನನಗೆ ಇವಿಎಂಗಳ ಬಗ್ಗೆ ವಿಶ್ವಾಸವಿಲ್ಲ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.
ತಮ್ಮ ಭಾಷಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ವಾರಣಾಸಿಯ ಅಭಿವೃದ್ಧಿ, ಉತ್ತರ ಪ್ರದೇಶದಲ್ಲಿನ ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅವರು ಪ್ರಸ್ತಾಪಿಸಿದರು. ವಾಸ್ತವವೆಂದರೆ, ಯುವಕರಿಗೆ ಉದ್ಯೋಗ ನೀಡಕೂಡದೆಂದು ಸರಕಾರವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದೆ ಎಂದೂ ಅವರು ಆಪಾದಿಸಿದರು.
ಇದೇ ವೇಳೆ, ಸಮಾಜವಾದಿ ಪಕ್ಷವು ಜಾತಿ ಜನಗಣತಿಯ ಪರವಾಗಿದೆ ಹಾಗೂ ಅಗ್ನಿವೀರ್ ಯೋಜನೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.