×
Ad

ಪಶ್ಚಿಮ ಬಂಗಾಳ | ನಾಲ್ವರು ವಿದ್ಯಾರ್ಥಿಗಳಿಗೆ ಹಲ್ಲೆ; ‘ಬಾಂಗ್ಲಾದೇಶಿ’ ಎಂದು ಕರೆದು ಅವಮಾನ

Update: 2025-08-21 22:38 IST

ಸಾಂದರ್ಭಿಕ ಚಿತ್ರ

ಕೋಲ್ಕತ್ತಾ, ಆ. 21: ಕಲ್ಕತ್ತಾ ವಿಶ್ವವಿದ್ಯಾನಿಲಯದ ನಾಲ್ವರು ವಿದ್ಯಾರ್ಥಿಗಳಿಗೆ ಕೋಲ್ಕತ್ತಾದ ಸಿಯಾಲ್ದಹ ರೈಲು ನಿಲ್ದಾಣದಲ್ಲಿ ಹಲ್ಲೆ ನಡೆಸಲಾಗಿದೆ ಹಾಗೂ ಅವರು ಬಂಗಾಳಿಯಲ್ಲಿ ಮಾತನಾಡಿರುವುದಕ್ಕೆ ‘‘ಬಾಂಗ್ಲಾದೇಶಿ’’ ಎಂದು ಕರೆದು ಅವಮಾನಿಸಲಾಗಿದೆ ಎನ್ನಲಾಗಿದೆ.

ವಿಶ್ವವಿದ್ಯಾನಿಲಯದ ಕಾರ್ಮಿಕೈಲ್ ಹಾಸ್ಟೆಲ್‌ ನ ವಿದ್ಯಾರ್ಥಿಯೋರ್ವ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಲು ನಗರದ ಸಿಯಲ್ದಹ್ ಸೇತುವೆಯ ಅಡಿಯಲ್ಲಿರುವ ಅಂಗಡಿಗೆ ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದೆ.

ಅಂಗಡಿಯವನೊಂದಿಗಿನ ಚೌಕಾಸಿ ಪ್ರಯತ್ನ ವಾಗ್ವಾದಕ್ಕೆ ತಿರುಗಿತು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಅನಂತರ ಬಂಗಾಳಿ ಮಾತನಾಡಿರುವುದಕ್ಕೆ ಅಂಗಡಿಯವನು ತನ್ನನ್ನು ‘‘ಬಾಂಗ್ಲಾದೇಶಿ’’ ಎಂದು ಕರೆದಿದ್ದಾನೆ ಎಂದು ಆತ ತಿಳಿಸಿದ್ದಾನೆ.

ಅಂಗಡಿಯಿಂದ ಹಿಂದಿರುಗಿದ ವಿದ್ಯಾರ್ಥಿ ಪ್ರತಿಭಟನೆ ನಡೆಸಲು ತನ್ನ ಮೂವರು ಗೆಳಯರೊಂದಿಗೆ ಹೋಗಿದ್ದಾನೆ. ಆದರೆ, ಅಂಗಡಿಯವನು ಇತರ ಅಂಗಡಿಯವರೊಂದಿಗೆ ಸೇರಿಕೊಂಡು ನಾಲ್ವರು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಅನಂತರ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕ್ಷಮೆ ಕೇಳುವಂತೆ ನಾವು ಮಾರಾಟಗಾರನಲ್ಲಿ ಕೇಳಿಕೊಂಡೆವು ಎಂದು ಗಾಯಗೊಂಡ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಇಲಿಯಾಸ್ ಅಖ್ತರ್ ತಿಳಿಸಿದ್ದಾರೆ.

‘‘ಆದರೆ, ಆತ ಕ್ಷಮೆ ಕೇಳಲು ಸಿದ್ಧನಿರಲಿಲ್ಲ. ಅಲ್ಲದೆ, ಆತ ನಮ್ಮಲ್ಲಿ ಹಿಂದಿಯಲ್ಲಿ ಮಾತನಾಡುವಂತೆ ತಿಳಿಸಿದ. ನಾವು ನಿರಾಕರಿಸಿದೆವು. ಇದು ನಾವು ಬಂಗಾಳದಲ್ಲಿ ಮಾತನಾಡುವ ಬಂಗಾಳಿ ಭಾಷೆ ಎಂದು ಹೇಳಿದೆವು. ಆತ ನಮ್ಮ ಬಗ್ಗೆ ನಿಂದನೆಯ ಭಾಷೆ ಬಳಸಲು ಆರಂಭಿಸಿದ. ನಮ್ಮನ್ನು ಬಾಂಗ್ಲಾದೇಶಿ ಎಂದು ಕರೆದ. ಈ ಸಂದರ್ಭ ಆತನೊಂದಿಗೆ ಇತರ ಅಂಗಡಿಯವರು ಕೂಡ ಸೇರಿಕೊಂಡರು’’ ಎಂದು ಆತ ಹೇಳಿದ್ದಾನೆ.

ನಾವು ನಾಲ್ವರು ಹಾಸ್ಟೆಲ್‌ಗೆ ಹಿಂದಿರುಗಲು ಪ್ರಯತ್ನಿಸಿದ ಸಂದರ್ಭ ಅವರು ರಾಡ್, ಹಾಕಿ ಸ್ಟಿಕ್‌ ನಿಂದ ಥಳಿಸಿದರು. ಅವರು ಚಾಕುವನ್ನು ಕೂಡ ತಂದಿದ್ದರು ಎಂದು ಅಖ್ತರ್ ಆರೋಪಿಸಿದ್ದಾನೆ.

ಹಲ್ಲೆಗೊಳಗಾದ ಇನ್ನೋರ್ವ ವಿದ್ಯಾರ್ಥಿ, ಅಫ್ರಿದ್ ಮೊಲ್ಲಾಹ್, ಮಾರಾಟಗಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರು ನಮ್ಮನ್ನು ‘‘ಬಾಂಗ್ಲಾದೇಶಿ’’ ಎಂದು ಕರೆದರು ಹಾಗೂ ನಿನಗೆ ಸಾಮರ್ಥ್ಯವಿದ್ದರೆ ನಮಗೆ ಏನಾದರೂ ಮಾಡು ಎಂದು ಹೇಳಿದರು. ಅವರು ನನ್ನ ಮೊಬೈಲ್ ಕಸಿದುಕೊಂಡರು. ನನ್ನ ಬಟ್ಟೆಯನ್ನು ಹರಿದರು’’ ಎಂದಿದ್ದಾನೆ.

ಈ ಘಟನೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಇತರ ವಿದ್ಯಾರ್ಥಿಗಳು ಮುಚಿಪಾರಾ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಹಾಗೂ ದೂರು ದಾಖಲಿಸಿದರು.

ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News