ಪಶ್ಚಿಮಬಂಗಾಳ: ನವಜಾತ ಶಿಶುವನ್ನು ರಾತ್ರಿಯಿಡೀ ಕಾವಲು ಕಾದ ಬೀದಿ ನಾಯಿಗಳು!
ಸಾಂದರ್ಭಿಕ ಚಿತ್ರ
ಕೋಲ್ಕತಾ, ಡಿ. 3: ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆಗಳು ಆಗಾಗ ವರದಿಯಾಗುತ್ತಿರುವ ನಡುವೆ ಬೀದಿ ನಾಯಿಗಳೇ ನವಜಾತ ಶಿಶುವೊಂದನ್ನು ರಾತ್ರಿಯಿಡೀ ಕಾವಲು ಕಾದು ರಕ್ಷಿಸಿದ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನದಿ ಪಟ್ಟಣದಲ್ಲಿ ನಡೆದಿದೆ.
ರೈಲ್ವೆ ಕಾರ್ಮಿಕರ ಕಾಲೋನಿಯ ಸ್ನಾನಗೃಹದ ಹೊರಗೆ ಈ ಶಿಶು ಕಂಡು ಬಂತು. ಶಿಶು ಜನಿಸಿ ಕೇವಲ ಗಂಟೆಗಳಾಗಿರಬಹುದು. ಶಿಶುವಿನ ದೇಹದಲ್ಲಿ ರಕ್ತದ ಕಲೆ ಇತ್ತು. ಬೀದಿ ನಾಯಿಗಳು ಬೊಗಳದೆ, ಅತ್ತಿತ್ತ ಚಲಿಸದೆ ಶಿಶುವನ್ನು ಸುತ್ತುವರಿದು ರಾತ್ರಿಯಿಡೀ ಕಾಯುತ್ತಿತ್ತು. ರಾತ್ರಿಯಿಡೀ ಶಿಶುವಿನ ಹತ್ತಿರ ಯಾರೊಬ್ಬರೂ ಸುಳಿಯಲು ಬಿಡಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
‘‘ಬೆಳಗ್ಗೆ ಸ್ನಾನಗೃಹದ ಬಳಿ ನವಜಾತ ಶಿಶುವನ್ನು ನೋಡಿ ನಾವು ಆಶ್ಚರ್ಯಗೊಂಡೆವು. ಶಿಶುವಿನ ಮೇಲೆ ನಾಯಿಗಳು ಆಕ್ರಮಣ ಮಾಡಿರಲಿಲ್ಲ. ಬದಲಾಗಿ ಕಾಯುತ್ತಿದ್ದವು’’ ಎಂದು ಶಿಶುವನ್ನು ಮೊದಲು ನೋಡಿದ ಸ್ಥಳೀಯ ನಿವಾಸಿ ಸುಕ್ಲಾ ಮಂಡಲ್ ಹೇಳಿದ್ದಾರೆ.
‘‘ಕುಟುಂಬವೊಂದರ ಅನಾರೋಗ್ಯ ಪೀಡಿತ ಮಗು ಅಳುತ್ತಿದೆ ಎಂದು ನಾನು ಭಾವಿಸಿದೆ. ನವಜಾತ ಶಿಶು ಹೊರಗೆ ಮಲಗಿದೆ, ನಾಯಿಗಳು ಕಾವಲು ಕಾಯುತ್ತಿರುತ್ತವೆ ಎಂದು ನಾನು ಕಲ್ಪಿಸಿರಲಿಲ್ಲ’’ ಎಂದು ಇನ್ನೋರ್ವ ನಿವಾಸಿ ಸುಭಾಷ್ ಪಾಲ್ ತಿಳಿಸಿದ್ದಾರೆ.
ನಾಯಿಗಳು ರಾತ್ರಿಯಿಡೀ ಯಾರಿಗೂ ಶಿಶುವಿನ ಹತ್ತಿರ ಹೋಗಲು ಬಿಟ್ಟಿರಲಿಲ್ಲ. ಆದರೆ, ಬೆಳಗ್ಗೆ ಶಿಶುವಿನ ಹತ್ತಿ ಹೋಗಲು ಬಿಟ್ಟಿದೆ. ಅನಂತರ ಶಿಶುವನ್ನು ದುಪ್ಪಟ್ಟಾದಲ್ಲಿ ಸುತ್ತಿ ಸಹಾಯಕ್ಕಾಗಿ ನೆರೆಹೊರೆಯುವರನ್ನು ಕರೆದೆ ಎಂದು ಸುಕ್ಲಾ ಮಂಡಲ್ ಹೇಳಿದ್ದಾರೆ.
ಶಿಶುವನ್ನು ಮಹೇಶ್‌ಗಂಜ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಕೃಷ್ಣನಗರದ ಸದಾರ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು. ವೈದ್ಯರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ, ಮಗು ಜನಿಸಿದ ನಿಮಿಷಗಳಲ್ಲಿ ತ್ಯಜಿಸಲಾಗಿದೆ ಎಂದು ತಿಳಿಸಿದರು ಎಂದು ಅವರು ಹೇಳಿದ್ದಾರೆ.
ನಬದ್ವೀಪ್‌ನ ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಹಾಗೂ ಶಿಶುವನ್ನು ದೀರ್ಘಕಾಲ ಆರೈಕೆಗೆ ವ್ಯವಸ್ಥೆ ಮಾಡಲು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.