×
Ad

ಪಶ್ಚಿಮ ಬಂಗಾಳ: ಕಾಂಗ್ರೆಸ್ ಕಾರ್ಯಕರ್ತನನ್ನು ಮರಕ್ಕೆ ಕಟ್ಟಿ ಹಾಕಿ, ಥಳಿಸಿ ಹತ್ಯೆ

Update: 2024-07-26 15:15 IST

PC : NDTV 

ಕೋಲ್ಕತ್ತಾ: ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಮರಕ್ಕೆ ಕಟ್ಟಿ, ಥಳಿಸಿ ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪಾಯಿಗುರಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಸಂಬಂಧ ಗುರುವಾರ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ಮಾಣಿಕ್ ರಾಯ್ ಎಂದು ಗುರುತಿಸಲಾಗಿದೆ.

ಈ ಘಟನೆಯು ಮೊಯ್ನಾಗುರಿಯ ಖರ್ಗಬಾರಿ-1 ಗ್ರಾಮ ಪಂಚಾಯತಿ ವ್ಯಾಪ್ತಿಯ ಹಥಾತ್ ಕಾಲನಿಯಲ್ಲಿರುವ ಮೃತ ವ್ಯಕ್ತಿಯ ನಿವಾಸದ ಬಳಿ ನಡೆದಿದೆ ಎಂದು ಹೇಳಲಾಗಿದೆ. ಮಾಣಿಕ್ ರಾಯ್ ಅನ್ನು ಮರಕ್ಕೆ ಕಟ್ಟಿ ಹಾಕಿರುವ ಐವರು ದುಷ್ಕರ್ಮಿಗಳ ಗುಂಪೊಂದು, ಅವರನ್ನು ಕಬ್ಬಿಣದ ಸಲಾಕೆ ಹಾಗೂ ದೊಣ್ಣೆಗಳಿಂದ ಮಾರಣಾಂತಿಕವಾಗಿ ಥಳಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಮಾಣಿಕ್ ರಾಯ್ ಅನ್ನು ಮೊಯ್ನಾಗುರಿಯಿಂದ ಜಲ್ಪಾಯಿಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಅವರು, ಗುರುವಾರ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆಯವರೊಂದಿನ ವೈಮನಸ್ಸಿನ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮೃತ ಮಾಣಿಕ್ ರಾಯ್ ಕುಟುಂಬದ ಸದಸ್ಯರು ಹಾಗೂ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ಚೌಧರಿ, ಕೆಲವು ಹಂತಕರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News