ಪಶ್ಚಿಮ ಬಂಗಾಳ | ಎಸ್‌ಐಆರ್ ವಿರುದ್ಧ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ
ಎಸ್‌ಐಆರ್ ಭೀತಿಯಿಂದ 7 ಮಂದಿ ಮೃತ್ಯು : ಅಭಿಷೇಕ್ ಬ್ಯಾನರ್ಜಿ ಆರೋಪ
Photo: indiatoday
ಹೊಸದಿಲ್ಲಿ, ನ. 3: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಭೀತಿಯಿಂದ ಪಶ್ಚಿಮಬಂಗಾಳದಲ್ಲಿ 7 ಮಂದಿ ಜೀವ ಕಳೆದುಕೊಂಡರು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರುದ್ಧ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದ ರೆಡ್ ರೋಡ್‌ನ ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಎದುರಿನಿಂದ ಆರಂಭವಾಗಿ ಜೊರಸಂಕೊ ಠಾಕೂರ್ ಬರಿವರೆಗೆ ಮಂಗಳವಾರ ನಡೆದ ಸಾಮೂಹಿಕ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು.
ವಿಶೇಷ ತೀವ್ರ ಪರಿಷ್ಕರಣೆ ಕುರಿತಂತೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಬಿಹಾರದಲ್ಲಿ ಎಷ್ಟು ಮಂದಿ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶಿಗಳು ಪತ್ತೆಯಾಗಿದ್ದಾರೆ ಎಂಬುದನ್ನು ಚುನಾವಣಾ ಆಯೋಗ ಬಹಿರಂಗಪಡಿಸಬೇಕು ಎಂದರು.
ಪಶ್ಚಿಮಬಂಗಾಳ ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಅರ್ಹ ಮತದಾರರನ್ನು ತೆಗೆದು ಹಾಕಿದರೆ, ಬಿಜೆಪಿ ಸರಕಾರವನ್ನು ಟಿಎಂಸಿ ಪತನಗೊಳಿಸಲಿದೆ ಎಂದು ಅವರು ಹೇಳಿದರು.
ಬಿಜೆಪಿ ಬಂಗಾಳಿ ವಲಸಿಗರಿಗೆ ಬಾಂಗ್ಲಾದೇಶಿ ಎಂದು ಹಣಪಟ್ಟಿ ಕಟ್ಟುತ್ತಿದೆ ಹಾಗೂ ಪಶ್ಚಿಮಬಂಗಾಳದ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಅವರು ಆರೋಪಿಸಿದರು.
‘‘ನೀವು (ಜನರು)ಆಧಾರ್ ಕಾರ್ಡ್‌ಗೆ ಎಷ್ಟು ಪಾವತಿಸಿದ್ದೀರಿ ? ನೀವು (ಕೇಂದ್ರ ಸರಕಾರ) ಪ್ರತಿಯೊಬ್ಬರಿಂದ 1,000 ರೂ. ತೆಗೆದುಕೊಂಡಿರಿ. ಈಗ ನೀವು ಮತದಾರರ ಪಟ್ಟಿಗೆ, ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಆಗುವುದಿಲ್ಲ ಎಂದು ಯಾಕೆ ಹೇಳುತ್ತೀರಿ ? ವಂಚಿಸಲು ನೀವು ಯಾರು? ಇದಕ್ಕಿರುವ ಒಂದೇ ಒಂದು ಪರಿಹಾರ ಕೇಂದ್ರದಲ್ಲಿರುವ ಎನ್‌ಡಿಎ ಸರಕಾರವನ್ನು ಬದಲಾಯಿಸುವುದು. ಆಗ ಆಧಾರ್ ಕಾರ್ಡ್‌ನ ಅಗತ್ಯ ಇರುವುದಿಲ್ಲ. ನೀವು ಎಷ್ಟು ಕಾರ್ಡ್ ಮಾಡಿದಿರಿ ? ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಕಿಸಾನ್ ಕಾರ್ಡ್, ಲೇಬರ್ ಕಾರ್ಡ್’’ ಎಂದು ಮಮತಾ ಬ್ಯಾನರ್ಜಿ ಹೇಳಿದರು.