ಭಾರತದ ಸಾಕ್ಷರತೆ ಪ್ರಮಾಣ ಎಷ್ಟು? ಯಾವ ರಾಜ್ಯದಲ್ಲಿ ಎಷ್ಟು ಸಾಕ್ಷರರು?
ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ಮಿಜೋರಾಂ (98.2%), ಲಕ್ಷದ್ವೀಪ (97.3%), ಕೇರಳ (95.3%), ತ್ರಿಪುರಾ (93.7%) ಹಾಗೂ ಗೋವಾ (93.6%) ರಾಜ್ಯಗಳು ದೇಶದಲ್ಲಿ ಒಟ್ಟಾರೆ ಗರಿಷ್ಠ ಸಾಕ್ಷರತೆ ಸಾಧಿಸಿದ ರಾಜ್ಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಏಳು ವರ್ಷಕ್ಕಿಂತ ಮೇಲಿನವರನ್ನು 2023-24ನೇ ಸಾಲಿನ ಕಾಲಾವಧಿ ಕಾರ್ಮಿಕ ಪಡೆ ಸಮೀಕ್ಷೆ (ಪಿಎಲ್ಇಎಸ್)ಗೆ ಒಳಪಡಿಸಲಾಗಿತ್ತು.
ಅಂಕಿ ಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯದಡಿಯ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ಈ ಸಮೀಕ್ಷಾ ವರದಿ ಬಿಡುಗಡೆ ಮಾಡಿದ್ದು, ಈ ವಯೋಮಿತಿಯಲ್ಲಿ ಭಾರತದ ಒಟ್ಟಾರೆ ಸಾಕ್ಷರತೆ ಪ್ರಮಾಣ 80.9 ಎಂದು ಹೇಳಲಾಗಿದೆ. ಐದು ವರ್ಷಕ್ಕಿಂತ ಮೇಲ್ಪಟ್ಟವರನ್ನು ಪರಿಗಣಿಸಿದರೆ ದೇಶದ ಸಾಕ್ಷರತೆ ಪ್ರಮಾಣ ಶೇಖಡ 79.7ರಷ್ಟಾಗುತ್ತದೆ.
ಪಿಎಲ್ಎಫ್ಎಸ್ ಸಮೀಕ್ಷೆಯಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವರವಾದ ಸಾಕ್ಷರತೆ ಅಂಕಿ ಅಂಶಗಳನ್ನು ವಿವಿಧ ವಯೋಮಿತಿಗಳಲ್ಲಿ, ಲಿಂಗ ಮತ್ತು ನಗರ/ ಗ್ರಾಮೀಣ ವರ್ಗಗಳಲ್ಲಿ ವಿಶ್ಲೇಷಿಸಲಾಗುತ್ತಿದೆ. ಏಳು ವರ್ಷಕ್ಕಿಂತ ಮೇಲ್ಪಟ್ಟ ಪುರುಷರರಲ್ಲಿ ರಾಷ್ಟ್ರಮಟ್ಟದ ಸಾಕ್ಷರತೆ ಪ್ರಮಾಣ ಶೇಕಡ 87.2ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ 74.6ರಷ್ಟಿದೆ. ಐದು ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಪ್ರಮಾಣ ಕ್ರಮವಾಗಿ 85.6 ಮತ್ತು 73.7ರಷ್ಟಿದೆ.
ಏಳು ವರ್ಷಕ್ಕಿಂತ ಹೆಚ್ಚಿನವರಲ್ಲಿ ಕನಿಷ್ಠ ಸಾಕ್ಷರತೆ ಹೊಂದಿದ ರಾಜ್ಯ ಎಂಬ ಅನಪೇಕ್ಷಿತ ದಾಖಲೆಗೆ ಬಿಹಾರ (74.3) ಪಾತ್ರವಾಗಿದೆ. ಮಧ್ಯಪ್ರದೇಶ (75.2), ರಾಜಸ್ಥಾನ (75.7) ಪಟ್ಟಿಯ ಕೊನೆಯಲ್ಲಿರುವ ಇತರ ರಾಜ್ಯಗಳು. ಐದು ವರ್ಷಕ್ಕಿಂತ ಮೇಲ್ಪಟ್ಟ ವರ್ಗಗಳನ್ನು ಪರಿಗಣಿಸಿದರೂ ಈ ಮೂರು ರಾಜ್ಯಗಳು ಅನುಕ್ರಮವಾಗಿ ಶೇಕಡ 73.2, 73.7 ಹಾಗೂ 74.9 ಸಾಕ್ಷರತೆಯೊಂದಿಗೆ ಪಟ್ಟಿಯ ಕೊನೆಯ ಮೂರು ಸ್ಥಾನಗಳಲ್ಲಿವೆ.
ಏಳು ವರ್ಷಕ್ಕಿಂತ ಮೇಲ್ಪಟ್ಟ ವರ್ಗದ ನಗರ ವಾಸಿಗಳಲ್ಲಿ ಶೇಕಡ 88.9ರಷ್ಟು ಮಂದಿ ಸಾಕ್ಷರರಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇಕಡ 77.5ರಷ್ಟಾಗಿದೆ. ಮಧ್ಯಪ್ರದೇಶದಂಥ ರಾಜ್ಯಗಳಲ್ಲಿ ಗ್ರಾಮೀಣ ಸಾಕ್ಷರತೆ ಶೇಕಡ 71.6ರಷ್ಟು ಮಾತ್ರ ಇದ್ದು, ನಗರ ಸಾಕ್ಷರತೆ 85.7ರಷ್ಟಿದೆ. ಅಂದರೆ ಶೇಕಡ 14ರಷ್ಟು ಅಂತರ ಕಂಡುಬಂದಿದೆ. ಅಂತೆಯೇ ಲಿಂಗ ಮಾನದಂಡದಲ್ಲಿ ನೋಡಿದರೆ ಪುರುಷರು ಮತ್ತು ಮಹಿಳೆಯರ ನಡುವಿನ ಸಾಕ್ಷರತೆ ಅಂತರ ಶೇಕಡ 12.6ರಷ್ಟಿದೆ. ರಾಜಸ್ಥಾನದಲ್ಲಿ ಈ ಅಂತರ ಗರಿಷ್ಠ (20.1) ಇದೆ. ಇಲ್ಲಿ ಪುರುಷರ ಸಾಕ್ಷರತೆ ಪ್ರಮಾಣ 85.9% ಇದ್ದರೆ, ಮಹಿಳಾ ಸಾಕ್ಷರತೆ ಪ್ರಮಾಣ ಕೇವಲ 65.8ರಷ್ಟಾಗಿದೆ.