×
Ad

ಕೇರಳ: ಪೊಲೀಸರಿಗೇ ವಂಚಿಸಲು ಹೋಗಿ ತಾನೇ ಚಳ್ಳೆಹಣ್ಣು ತಿಂದ ಸೈಬರ್ ವಂಚಕ!

ಜಿಲ್ಲಾ ಪೊಲೀಸ್ ಮುಖ್ಯಸ್ಥರ ಸೋಗಿನಲ್ಲಿ 40,000 ರೂ.ಗೆ ಬೇಡಿಕೆ ಇಟ್ಟಿದ್ದ ವಂಚಕ

Update: 2025-09-01 11:54 IST

ಸಾಂದರ್ಭಿಕ ಚಿತ್ರ (PTI)

ಕೊಲ್ಲಂ: ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸೈಬರ್ ವಂಚನೆಯ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, ತನ್ನನ್ನು ತಾನು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಂದು ಸೋಗು ಹಾಕಿರುವ ಸೈಬರ್ ವಂಚಕನೊಬ್ಬ, ಪೊಲೀಸರ ಬಳಿಯೇ 40,000 ರೂ.ಗೆ ಬೇಡಿಕೆ ಇಟ್ಟು, ತಾನೇ ಚಳ್ಳೆಹಣ್ಣು ತಿಂದಿರುವ ಘಟನೆ ವರದಿಯಾಗಿದೆ.

ನಕಲಿ ವಾಟ್ಸ್ ಆ್ಯಪ್ ಖಾತೆಯ ಮೂಲಕ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಸೋಗಿನಲ್ಲಿ ಸಂದೇಶ ಕಳಿಸಿರುವ ಸೈಬರ್ ವಂಚಕ, ತಳ ಹಂತದ ಪೊಲೀಸ್ ಅಧಿಕಾರಿಗಳ ಬಳಿ 40,000 ರೂ.ಗಾಗಿ ಮನವಿ ಮಾಡಿದ್ದಾನೆ. ಹಲವು ಪೊಲೀಸ್ ಅಧಿಕಾರಿಗಳು ನಕಲಿ ವಾಟ್ಸ್ ಆ್ಯಪ್ ಸಂಖ್ಯೆಯಿಂದ ಕಳೆದ ವಾರ ಇಂತಹ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಈ ವಾಟ್ಸ್ ಆ್ಯಪ್ ಖಾತೆಯ ಪ್ರೊಫೈಲ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಶು ಪ್ರತಾಪ್ ಟಿ.ಕೆ. ಅವರ ಭಾವಚಿತ್ರವನ್ನು ಹೊಂದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನನಗೆ ತುರ್ತು ಅಗತ್ಯವಿರುವುದರಿಂದ, 40,000 ರೂ. ಅನ್ನು ನನ್ನ ಖಾತೆಗೆ ವರ್ಗಾಯಿಸಿ ಎಂದು ಪೊಲೀಸ್‌ ಸೋಗಿನಲ್ಲಿ ಸೈಬರ್ ವಂಚಕ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಿದ್ದಾನೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಇಂತಹ ವ್ಯಾಪಕ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಪೊಲೀಸ್ ಅಧಿಕಾರಿಗಳು, ಈ ವಿಷಯವನ್ನು ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ನಿಗಾವಣೆ ಘಟಕವು ಸೈಬರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹೊಸದಿಲ್ಲಿಯ ಸೋನ್ ಗೇಟ್ ನಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಸೈಬರ್ ವಂಚಕ ಮನವಿ ಮಾಡಿದ್ದಾನೆ. ಇನ್ನಿತರ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆದಾರನನ್ನು ಪತ್ತೆ ಹಚ್ಚುವ ಕೆಲಸಕ್ಕೆ ಪೊಲೀಸರು ಚಾಲನೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೇರಳದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿದ್ದು, ಸೈಬರ್ ವಂಚಕರು ಪೊಲೀಸ್ ಅಧಿಕಾರಿಗಳು, ಅಧಿಕಾರಿಗಳು, ರಾಜಕಾರಣಿಗಳು ಅಥವಾ ಉದ್ಯಮಿಗಳಂತೆ ಸೋಗು ಹಾಕಿ ವಂಚಿಸಿರುವ ಘಟನೆಗಳು ವರದಿಯಾಗಿವೆ.

ಆದರೆ, ಈ ಪ್ರಕರಣದಲ್ಲಿ ಯಾವುದೇ ಹಣಕಾಸು ನಷ್ಟ ಸಂಭವಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಘಟನೆಗಳಲ್ಲಿ ಸೈಬರ್ ವಂಚಕರಿಂದ ತಮ್ಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸೋಗಿನಲ್ಲಿ ಮನವಿ ಸ್ವೀಕರಿಸಿದ್ದ ಕೇರಳದ ಎರಡು ಮುಖ್ಯ ಹಣಕಾಸು ಸಂಸ್ಥೆಗಳ ಅಧಿಕಾರಿಗಳು, ತಮ್ಮ ಹಣ ಕಳೆದುಕೊಂಡಿದ್ದ ಘಟನೆಗಳು ವರದಿಯಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News