×
Ad

ಧಾರ್ಮಿಕ ಮೆರವಣಿಗೆಯಲ್ಲಿ ಶಸ್ತ್ರಗಳನ್ನೇಕೆ ಹೊಂದಿದ್ದರು, ಯಾರು ನೀಡಿದ್ದರು?: ನೂಹ್‌ ಹಿಂಸಾಚಾರ ಬಗ್ಗೆ ಕೇಂದ್ರ ಸಚಿವ ಪ್ರಶ್ನೆ

Update: 2023-08-02 15:08 IST

ಕೇಂದ್ರ ಸಚಿವ ರಾವ್‌ ಇಂದರ್‌ಜಿತ್‌ ಸಿಂಗ್‌ (Photo: Facebook)

ಹೊಸದಿಲ್ಲಿ: ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಜನರೇಕೆ ಶಸ್ತ್ರಗಳನ್ನು ಹೊಂದಿದ್ದರು ಎಂದು ನೂಹ್‌ ಮೂಲಕ ಸಾಗಿ ಹಿಂಸಾತ್ಮಕ ತಿರುವು ಪಡೆದ ಶೋಭಾಯಾತ್ರೆಯ ಕುರಿತಂತೆ ಗುರುಗ್ರಾಮ ಸಂಸದ ಹಾಗೂ ಕೇಂದ್ರ ಸಚಿವ ರಾವ್‌ ಇಂದರ್‌ಜಿತ್‌ ಸಿಂಗ್‌ ಪ್ರಶ್ನಿಸಿದ್ದಾರೆ.

“ಯಾರು ಅವರಿಗೆ ಮೆರವಣಿಗೆಗಾಗಿ ಶಸ್ತ್ರಗಳನ್ನು ನೀಡಿದರು? ಖಡ್ಗ ಅಥವಾ ಬೆತ್ತಗಳನ್ನು ತೆಗೆದುಕೊಂಡು ಯಾರು ಮೆರವಣಿಗೆಗೆ ಹೋಗುತ್ತಾರೆ?” ಎಂದು ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ ಸಿಂಗ್‌ ಪ್ರಶ್ನಿಸಿದರು.

“ಇದು ತಪ್ಪು. ಈ ಕಡೆಯಿಂದಲೂ ಪ್ರಚೋದನೆಯಾಗಿದೆ. ಇನ್ನೊಂದು ಕಡೆಯಿಂದ ಪ್ರಚೋದನೆಯಾಗಿಲ್ಲ ಎಂದು ನಾನು ಹೇಳುತ್ತಿಲ್ಲ,” ಎಂದರು.

ನೂಹ್‌ನಲ್ಲಿ ಪರಿಸ್ಥಿತಿ ನಿಭಾಯಿಸಲು ಪೊಲೀಸರಿಗೆ ಸಾಧ್ಯವಾಗದೇ ಇರುವುದರಿಂದ ಅಲ್ಲಿಗೆ ಕೇಂದ್ರೀಯ ಪಡೆಗಳನ್ನು ಕಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರಿಗೆ ಹೇಳಿದ್ದಾಗಿಯೂ ಅವರು ತಿಳಿಸಿದರು.

ಪ್ರಚೋದನೆಯ ಹಿಂದೆ ಸಾಮಾಜಿಕ ಜಾಲತಾಣಗಳ ಪಾತ್ರವೂ ಇದೆ ಎಂದು ಹೇಳಿದ ಅವರು, ಅಂತಹ ವೀಡಿಯೋಗಳನ್ನು ಯಾರು ಅಪ್‌ಲೋಡ್‌ ಮಾಡಿದ್ದಾರೆಂದು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. "ನಾವು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಬರುತ್ತಿದ್ದೇವೆ. ನಿಮ್ಮ ದಾಮಾದ್‌ (ಅಳಿಯ) ಕೂಡ ಬರುತ್ತಿದ್ದಾರೆ. ನಿಲ್ಲಿಸಲು ಸಾಧ್ಯವಾದರೆ ನಿಲ್ಲಿಸಿ” ಎಂದು ಹೇಳುವ ವೀಡಿಯೋಗಳಿದ್ದವು ಎಂದು ಕೆಲವರು ಹೇಳಿದ್ದಾರೆ. ಇಂತಹ ಬೇಜವಾಬ್ದಾರಿಯ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಿದರೆ ಋಣಾತ್ಮಕ ಪರಿಣಾಮ ಬೀರುತ್ತದೆ, ಎಂದು ಸಿಂಗ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News