ಜನಪ್ರಿಯ ಮಧುಮೇಹ, ತೂಕ ಇಳಿಕೆ ಔಷಧಗಳಿಂದ ಅಪರೂಪದ ದೃಷ್ಟಿನಷ್ಟ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಜಿನಿವಾ: ಒಝೆಂಪಿಕ್,ರೈಬೆಲ್ಸಸ್ ಮತ್ತು ವೆಗೋವಿ ಸೇರಿದಂತೆ ಸೆಮಾಗ್ಲುಟೈಡ್ ಒಳಗೊಂಡಿರುವ ಜನಪ್ರಿಯ ಮಧುಮೇಹ ಮತ್ತು ತೂಕ ಇಳಿಕೆ ಔಷಧಿಗಳಿಂದ ಉಂಟಾಗುವ ಅಪರೂಪದ, ಆದರೆ ಗುಣಪಡಿಸಲು ಸಾಧ್ಯವಾಗದ ದೃಷ್ಟಿನಷ್ಟದ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯು ಜಾಗತಿಕ ಸುರಕ್ಷತಾ ಎಚ್ಚರಿಕೆಯನ್ನು ಹೊರಡಿಸಿದೆ.
ಜೂ.27ರಂದು ಹೊರಡಿಸಲಾಗಿರುವ ಎಚ್ಚರಿಕೆಯು ನಾನ್-ಆರ್ಟೆರಿಕ್ ಅಂಟೀರಿಯರ್ ಇಸ್ಕೆಮಿಕ್ ನ್ಯೂರೋಪತಿ(ಎನ್‌ಎಐಒಎನ್)ಯ ಅಪಾಯವನ್ನು ಎತ್ತಿ ತೋರಿಸಿದೆ. ಇದು ಸಾಮಾನ್ಯವಾಗಿ ಒಂದು ಕಣ್ಣಿನಲ್ಲಿ ಹಠಾತ್,ನೋವುರಹಿತ ಮತ್ತು ಗುಣಪಡಿಸಲಾಗದ ದೃಷ್ಟಿ ನಷ್ಟಕ್ಕೆ ಕಾರಣವಾಗಬಲ್ಲದು.
ಪ್ರಸ್ತುತ ಎನ್‌ಎಐಒಎನ್‌ಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ ಮತ್ತು ದೃಷ್ಟಿ ನಷ್ಟವನ್ನು ಸಾಮಾನ್ಯವಾಗಿ ಗುಣಪಡಿಸಲು ಸಾಧ್ಯವಿಲ್ಲ ಎಂದು ಡಬ್ಲ್ಯುಎಚ್‌ಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ(ಇಎಂಎ)ಯು ಈಗಾಗಲೇ ಈ ಔಷಧಿಗಳ ಸುರಕ್ಷತಾ ಪ್ರೊಫೈಲ್‌ಗಳನ್ನು ನವೀಕರಿಸುವ ಮೂಲಕ ಈ ಅಪಾಯದ ವಿರುದ್ಧ ಕ್ರಮವನ್ನು ತೆಗೆದುಕೊಂಡಿದೆ. ಸಮಗ್ರ ಸುರಕ್ಷತಾ ಪರಿಶೀಲನೆಯ ಬಳಿಕ ಸಂಸ್ಥೆಯ ಔಷಧೋಪಚಾರ ಅಪಾಯ ಮೌಲ್ಯಮಾಪನ ಸಮಿತಿಯು ಎನ್‌ಎಐಒಎನ್ ಅನ್ನು ಪ್ರತಿ 10,000 ಬಳಕೆದಾರರಲ್ಲಿ ಒಬ್ಬರನ್ನು ಕಾಡಬಹುದಾದ ‘ಅತ್ಯಂತ ಅಪರೂಪದ’ ಅಡ್ಡ ಪರಿಣಾಮ ಎಂದು ಪಟ್ಟಿ ಮಾಡುವಂತೆ ಶಿಫಾರಸು ಮಾಡಿದೆ.
ಸೆಮಾಗ್ಲುಟೈಡ್ ಟೈಪ್ 2 ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆಗಾಗಿ ಜಾಗತಿಕವಾಗಿ ವ್ಯಾಪಕ ಬಳಕೆಯಲ್ಲಿದೆ. ಆದಾಗ್ಯೂ ಈ ಔಷಧಿಗಳ ಹೆಚ್ಚುತ್ತಿರುವ ಜನಪ್ರಿಯತೆಯು ಹೊಸ ಸುರಕ್ಷತಾ ಕಳವಳಗಳ ಮೇಲೆ ಬೆಳಕು ಚೆಲ್ಲಿದೆ.
ಎನ್‌ಎಐಒಎನ್ ಅನ್ನು ಗ್ಲುಕೋಮಾದ ಬಳಿಕ ಎರಡನೇ ಅತ್ಯಂತ ಸಾಮಾನ್ಯ ನೇತ್ರ ನರರೋಗವಂದು ಪರಿಗಣಿಸಲಾಗಿದ್ದು, ಯಾವುದೇ ನೋವು ಇಲ್ಲದೆ ಕಾಣಿಸಿಕೊಳ್ಳಬಹುದು. ಹೀಗಾಗಿ ಆರಂಭಿಕ ಹಂತದಲ್ಲಿ ಅದನ್ನು ಪತ್ತೆ ಹಚ್ಚುವುದು ಕಠಿಣ. ಹಠಾತ್ ದೃಷ್ಟಿ ನಷ್ಟ ಮತ್ತು ಆಪ್ಟಿಕ್ ಡಿಸ್ಕ್ ಅಥವಾ ಕಣ್ಣಿನ ನರ ತಲೆಯ ಊತ ಇದರ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ.
ಡಬ್ಲ್ಯುಎಚ್‌ಒ ಸೆಮಾಗ್ಲುಟೈಡ್ ಜೊತೆಗೆ ತಳುಕು ಹಾಕಿಕೊಂಡಿರುವ ಎನ್‌ಎಐಒಎನ್ ಪ್ರಕರಣಗಳ ವರದಿಗಳನ್ನು ಹಲವಾರು ದೇಶಗಳಿಂದ ಸ್ವೀಕರಿಸಿದೆ. ಮೇ 2025ರ ತನ್ನ ಸಭೆಯಲ್ಲಿ ಈ ವರದಿಗಳನ್ನು ಪರಿಶೀಲಿಸಿದ ಡಬ್ಲ್ಯುಎಚ್‌ಒದ ಔಷಧೀಯ ಉತ್ಪನ್ನಗಳ ಸುರಕ್ಷತೆ ಕುರಿತು ಸಲಹಾ ಸಮಿತಿಯು ಸೆಮಾಗ್ಲುಟೈಡ್‌ನ ಅಪಾಯ ನಿರ್ವಹಣೆ ಯೋಜನೆಗಳ ಪರಿಷ್ಕರಣೆಗೆ ಶಿಫಾರಸು ಮಾಡಿದೆ.
ಈ ಸಂಭಾವ್ಯ ಅಪಾಯದ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡುವಂತೆ ಮತ್ತು ಜಾಗರೂಕರಾಗಿರುವಂತೆ ವಿಶ್ವಾದ್ಯಂತ ವೈದ್ಯರಿಗೆ ಆಗ್ರಹಿಸಲಾಗಿದೆ. ಪ್ರಸ್ತುತ ಸೆಮಾಗ್ಲುಟೈಡ್ ಬಳಸುತ್ತಿರುವ ರೋಗಿಗಳು ದೃಷ್ಟಿಯಲ್ಲಿ ಹಠಾತ್ ಬದಲಾವಣೆಗಳನ್ನು ಅನುಭವಿಸಿದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಸೂಚಿಸಲಾಗಿದೆ.