×
Ad

‘ಆಪರೇಷನ್ ಸಿಂಧೂರ’ ಸುದ್ದಿಗೋಷ್ಠಿಯ ಮುಂಚೂಣಿಯಲ್ಲಿದ್ದ ಕರ್ನಲ್ ಸೋಫಿಯಾ ಕುರೇಶಿ ಯಾರು?

Update: 2025-05-07 15:22 IST

ಸೋಫಿಯಾ ಕುರೇಶಿ | PC : PTI 

ಹೊಸದಿಲ್ಲಿ: ಎ.22ರ ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತವು ನಿನ್ನೆ ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತು ಪತ್ರಿಕಾಗೋಷ್ಠಿಯ ಮುಂಚೂಣಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರ ಜೊತೆಗೆ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರಿದ್ದರು.

ಕರ್ನಲ್ ಸೋಫಿಯಾ ಕುರೇಶಿ ಯಾರು?

ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಅತ್ಯಂತ ಗೌರವಾನ್ವಿತ ಅಧಿಕಾರಿಯಾಗಿರುವ ಕರ್ನಲ್ ಸೋಫಿಯಾ ಕುರೇಶಿ ಬಲವಾದ ಮಿಲಿಟರಿ ಹಿನ್ನೆಲೆಯನ್ನು ಹೊಂದಿದ್ದಾರೆ. 2016ರಲ್ಲಿ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಅವರು ಇತಿಹಾಸವನ್ನು ಸೃಷ್ಟಿಸಿದ್ದರು. ಅದು ಆ ಸಮಯದಲ್ಲಿ ಭಾರತವು ಆಯೋಜಿಸಿದ್ದ ಅತಿ ದೊಡ್ಡ ಮಿಲಿಟರಿ ಕವಾಯತು ಆಗಿದ್ದು,ಭಾಗವಹಿಸಿದ್ದ 18 ದೇಶಗಳ ಪೈಕಿ ಸೋಫಿಯಾ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು.

ಮೂಲತ ಗುಜರಾತಿನವರಾಗಿರುವ ಸೋಫಿಯಾ ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 1999ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಿಂದ ಲೆಫ್ಟಿನಂಟ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದರು.

ಮಿಲಿಟರಿ ಬೇರುಗಳನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೋಫಿಯಾರ ಪತಿ ಯಾಂತ್ರೀಕೃತ ಪದಾತಿ ದಳದಲ್ಲಿ ಅಧಿಕಾರಿಯಾಗಿದ್ದಾರೆ.

ಸೋಫಿಯಾ 2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News