“ನಿಮ್ಮ ಕುಟುಂಬಗಳೇಕೆ ಪಾಕಿಸ್ತಾನಕ್ಕೆ ಹೋಗಿಲ್ಲ” ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಶಿಕ್ಷಿಕಿ; ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತಮ್ಮ ಶಿಕ್ಷಕಿ ಮತೀಯ ಹೇಳಿಕೆ ನೀಡಿದ್ದಾರೆ ಹಾಗೂ ತಮ್ಮ ಕುಟುಂಬಗಳೇಕೆ ದೇಶ ವಿಭಜನೆಯ ಸಂದರ್ಭ ಪಾಕಿಸ್ತಾನಕ್ಕೆ ತೆರಳಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂದು ದಿಲ್ಲಿಯ ಗಾಂಧಿನಗರದಲ್ಲಿರುವ ಸರ್ವೋದಯ ಬಾಲ ವಿದ್ಯಾಲಯದ ನಾಲ್ಕು ಮಂದಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳ ಕುಟುಂಬಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಿಕ್ಷಕಿ ಹೇಮಾ ಗುಲಾಟಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮುಝಫ್ಫರನಗರದಲ್ಲಿ ಶಿಕ್ಷಕಿಯೊಬ್ಬರ ಅಣತಿಯ ಮೇರೆಗೆ ಮುಸ್ಲಿಂ ಬಾಲಕನೊಬ್ಬ ಸಹಪಾಠಿಗಳಿಂದಲೇ ಹೊಡೆತ ತಿಂದ ಘಟನೆಯ ಬೆನ್ನಲ್ಲೇ ದಿಲ್ಲಿಯಿಂದ ಈ ಘಟನೆ ವರದಿಯಾಗಿದೆ.
ದಿಲ್ಲಿ ಶಾಲೆಯ ಶಿಕ್ಷಕಿ ಬುಧವಾರ ನಿಂದನಾತ್ಮಕ ಮಾತುಗಳನ್ನಾಡಿದ್ದರೆಂದು ದೂರುದಾರ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ. ಶಿಕ್ಷಕಿ ಮಕ್ಕಾ, ಕುರ್ ಆನ್ ಕುರಿತೂ ನಿಂದನಾತ್ಮಕವಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. “ವಿಭಜನೆಯ ವೇಳೆ ನೀವು ಪಾಕಿಸ್ತಾನಕ್ಕೆ ಹೋಗಿಲ್ಲ. ಭಾರತದಲ್ಲೇ ಉಳಿದಿರಿ. ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆಯಿಲ್ಲ,” ಎಂದು ಶಿಕ್ಷಕಿ ಹೇಳಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಿಕ್ಷಕಿಯನ್ನು ಅಮಾನತುಗೊಳಿಸಬೇಕೆಂಬ ಬೇಡಿಕೆಯನ್ನೂ ವಿದ್ಯಾರ್ಥಿಗಳ ಹೆತ್ತವರು ಮುಂದಿಟ್ಟಿದ್ದಾರೆ.
ಈ ಘಟನೆಯಲ್ಲಿ ಸ್ಥಳೀಯ ಶಾಸಕ ಹಾಗೂ ಆಪ್ ನಾಯಕ ಅನಿಲ್ ಕುಮಾರ್ ಬಾಜಪೇಯಿ ಟೀಕಿಸಿದ್ದಾರೆ. ಈ ರೀತಿ ಮಾತನಾಡುವ ಶಿಕ್ಷಕರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.