ಎಂನರೇಗಾ ಅನುದಾನ ಗಾತ್ರ ಶೇ.12 ಏರಿಕೆ?
ಎಂನರೇಗಾ | PC ; MGNREGA
ಹೊಸದಿಲ್ಲಿ: ಮುಂದಿನ ಐದು ವರ್ಷಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಎಂನರೇಗಾ) ಬಜೆಟ್ ಗಾತ್ರದಲ್ಲಿ ಶೇ.12ರಷ್ಟು ಏರಿಕೆಗೆ ಕೇಂದ್ರ ವಿತ್ತ ಸಚಿವಾಲಯ ಅನುಮೋದನೆ ನೀಡುವ ನಿರೀಕ್ಷೆಯಿದೆ.ಎಂನರೇಗಾ ಯೋಜನೆಯ ಬಜೆಟ್‌ಗಾತ್ರದಲ್ಲಿ ಏರಿಕೆ ಮಾಡುವಂತೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಆಗ್ರಹಿಸಿತ್ತು.
ಎಂನರೇಗಾ ಯೋಜನೆಗೆ 2029-30ರವರೆಗೆ ಐದು ವರ್ಷಗಳ ಕಾಲ 5.23 ಲಕ್ಷ ಕೋಟಿ ರೂ. ಬಜೆಟ್ ಅನುದಾನ ನೀಡುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ವೆಚ್ಚ ಹಣಕಾಸು ಸಮಿತಿ (ಇಎಫ್‌ಸಿ)ಗೆ ಬೇಡಿಕೆಯನ್ನು ಸಲ್ಲಿಸಿತ್ತು.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಸ್ತಾವನೆಗೆ ತಾನು ಸಮ್ಮತಿ ನೀಡುವ ಸಾಧ್ಯತೆಯಿದ್ದು, ಅದು ಕೇಂದ್ರ ಸಂಪುಟದ ಅನುಮೋದನೆಯೊಂದಿಗೆ ಅಂತಿಮಗೊಳ್ಳಲಿದೆ.2020-21ರಿಂದ 2024-25ರವರೆಗಿನ ಹಣಕಾಸು ವರ್ಷಗಳಲ್ಲಿ ಎಂನರೇಗಾಕ್ಕೆ ಒಟ್ಟು 4.68 ಲಕ್ಷ ಕೋಟಿ ರೂ. ಕೇಂದ್ರದ ಅನುದಾನನೀಡಲಾಗಿತ್ತು.
2024-25ನೇ ಹಣಕಾಸು ವರ್ಷದಲ್ಲಿ 86 ಸಾವಿರ ಕೋಟಿ ರೂ. ಬಜೆಟ್ ಅನುದಾನವನ್ನು ನೀಡಲಾಗಿತ್ತು. ಎಂನರೇಗಾ ಯೋಜನೆಯಡಿ ನೋಂದಣಿಗೊಂಡ ಕುಟುಂಬಗಳ ಸಂಖ್ಯೆಯಲ್ಲಿ ಶೇ.8.6ರಷ್ಟು ಏರಿಕೆಯಾದ ಹೊರತಾಗಿಯೂ ಉದ್ಯೋಗ ಪ್ರಮಾಣವು 2024-25ನೇ ಸಾಲಿನಲ್ಲಿ ಶೇ.7.1ಕ್ಕೆ ಕುಸಿದಿತ್ತು.
ಯೋಜನೆಯಡಿಯ ಸರಾಸರಿ ಕೆಲಸದ ದಿನಗಳಲ್ಲಿ ಶೇ.4.3ರಷ್ಟು ಇಳಿಕೆಯಾಗಿತ್ತು ಹಾಗೂ 100 ದಿನಗಳ ಕೆಲಸವನ್ನು ಪೂರ್ತಿಗೊಳಿಸಿದ ಕುಟುಂಬಗಳ ಸಂಖ್ಯೆ ಶೇ.11.9ರಷ್ಟು ಕುಸಿದಿತ್ತು. ಒಡಿಶಾ (34.8ಶೇ.), ತಮಿಳುನಾಡು (25.1 ಶೇ.) ಹಾಗೂ ರಾಜಸ್ಥಾನ (15.9 ಶೇ.), ಮಹಾರಾಷ್ಟ್ರ (39.7 ಶೇ.), ಹಿಮಾಚಲ ಪ್ರದೇಶ (14.8 ಶೇ.) ಗಳಲ್ಲಿ ಎಂನರೇಗಾ ಉದ್ಯೋಗ ಪ್ರಮಾಣದಲ್ಲಿ ತೀವ್ರ ಕುಸಿತವುಂಟಾಇದೆ. ಆದೆರ ಬಿಹಾರದಲ್ಲಿ (13.3 ಶೇ.) ಮಾತ್ರ ಏರಿಕೆ ಕಂಡುಬಂದಿದೆ.
2024-25ನೇ ಸಾಲಿನಲ್ಲಿ ಎಂನರೇಗಾ ಯೋಜನೆಯಡಿ ನೋಂದಣಿಗೊಂಡ ಕುಟುಂಬಗಳ ಸಂಖ್ಯೆಯಲ್ಲಿ 8.6 ಶೇಕಡ ಹೆಚ್ಚಳವಾಗಿದೆ. ಆದರೆ ಉದ್ಯೋಗ ಲಭ್ಯತೆಯ ಪ್ರಮಾಣದಲ್ಲಿ ಹೆಚ್ಚಿನ ಸುಧಾರಣೆ ಯಾಗಿಲ್ಲ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭರವಸೆಯ ಹೊರತಾಗಿಯೂ ಆದಾರ್ ಪೇಮೆಂಟ್ ಬ್ರಿಜ್ ವ್ಯವಸ್ಥೆಯನ್ನು ಹೊಂದಿರದ ವ್ಯಕ್ತಿಗಳನ್ನು ಎಂನರೇಗಾ ಉದ್ಯೋಗವನ್ನು ನಿರಾಕರಿಸಲಾಗಿದೆ.
ಇದರಿಂದಾಗಿ ಎಲ್ಲಾ ಕಾರ್ಮಿಕರ ಪೈಕಿ ಶೇ.27.5ರಷ್ಟು ಕಾರ್ಮಿಕರು ಹಾಗೂ ಶೇ.1.5ರಷ್ಟು ಸಕ್ರಿಯ ಕಾರ್ಮಿಕರು ಇನ್ನೂ ಕೂಡಾ ಎಬಿಪಿಎಸ್‌ಗೆ ಅನರ್ಹರಾಗಿದ್ದಾರೆ. ಮಹಾರಾಷ್ಟ್ರದಲ್ಲಿ (63.4 ಶೇ.),ಗುಜರಾತ್‌ನಲ್ಲಿ (58.1 ಶೇ.) ಹಾಗೂ ಜಾರ್ಖಂಡ್‌ನಲ್ಲಿ (38.1 ಶೇ.) ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಕಾರ್ಮಿಕರು ಎಬಿಪಿಎಸ್ ಯೋಜನೆಗೆ ಅನರ್ಹರಾಗಿದ್ದಾರೆ ಎಂದು ವರದಿ ಹೇಳಿದೆ.