"ದಿಲ್ಲಿ ಬದಲು ಪಂಜಾಬ್ ಯಾಕೆ?": ಅಮೆರಿಕ ಗಡೀಪಾರು ವಿಮಾನಗಳು ಅಮೃತಸರದಲ್ಲಿ ಬಂದಿಳಿಯುತ್ತಿರುವ ಕುರಿತು ಪಂಜಾಬ್ ಸಿಎಂ ಭಗವಂತ್ ಮಾನ್ ಪ್ರಶ್ನೆ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (PTI)
ಚಂಡೀಗಢ: ಅಮೆರಿಕದಿಂದ ಗಡೀಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತು ಬರುತ್ತಿರುವ ವಿಮಾನಗಳು ಬಂದಿಳಿಯಲು ಅಮೃತಸರವನ್ನು ಆಯ್ಕೆ ಮಾಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಟೀಕಿಸಿದ್ದಾರೆ.
ಫೆಬ್ರವರಿ 15 ಹಾಗೂ 16ರಂದು ಮತ್ತೆರಡು ವಿಮಾನಗಳು ಅಮೃತಸರದಲ್ಲಿ ಬಂದಿಳಿಯಲಿದ್ದು, ಇದು ಪಂಜಾಬ್ ಹೆಸರಿಗೆ ಮಸಿ ಬಳಿಯಲು ಮಾಡುತ್ತಿರುವ ಉದ್ದೇಶಪೂರ್ವಕ ಪ್ರಯತ್ನವೇ ಎಂದು ನರೇಂದ್ರ ಮೋದಿಯನ್ನು ಅವರು ಪ್ರಶ್ನಿಸಿದ್ದಾರೆ. ಅಮೆರಿಕಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿಗೆ ಇದು ಡೊನಾಲ್ಡ್ ಟ್ರಂಪ್ ನೀಡುವ ಉಡುಗೊರೆಯೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
“ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗಿದ್ದ ಭಾರತೀಯ ಪ್ರಜೆಗಳನ್ನು ಕರೆ ತರುತ್ತಿರುವ ಎರಡನೆ ವಿಮಾನ ಅಮೃತಸರದಲ್ಲಿ ಬಂದಿಳಿಯಲಿದೆ. ವಿಮಾನವು ಬಂದಿಳಿಯಲು ಯಾವ ಮಾನದಂಡವನ್ನು ಆಧರಿಸಿ ಅಮೃತಸರವನ್ನು ಆಯ್ಕೆ ಮಾಡಲಾಗಿದೆ ಎಂಬ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಮಗೆ ತಿಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. “ಪ್ರಧಾನಿ ಮೋದಿ ಹಾಗೂ ಟ್ರಂಪ್ ನಡುವೆ ಸಭೆ ನಡೆಯುವಾಗ, ಅಮೆರಿಕ ಪ್ರಾಧಿಕಾರಗಳು ನಮ್ಮ ಜನರಿಗೆ ಕೋಳ ತೊಡಿಸುತ್ತಿವೆ. ಇದೇನಾ ಟ್ರಂಪ್ ನೀಡಿದ ಉಡುಗೊರೆ” ಎಂದೂ ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಫೆಬ್ರವರಿ 5ರಂದು ಅಮೃತಸರಕ್ಕೆ ಬಂದಿಳಿದ ಗಡೀಪಾರು ವಿಮಾನದಲ್ಲಿ ಬಹುತೇಕರು ಗುಜರಾತ್ ನವರಾಗಿದ್ದಾಗ, ವಿಮಾನವನ್ನೇಕೆ ಅಹಮದಾಬಾದ್ ಗೆ ಕಳಿಸಲಿಲ್ಲ? ಎಂದೂ ಮಾನ್ ಖಾರವಾಗಿ ಪ್ರಶ್ನಿಸಿದ್ದಾರೆ.
ವಿಮಾನಗಳು ಬಂದಿಳಿಯುವ ಸ್ಥಳವನ್ನಾಗಿ ಅಮೃತಸರವನ್ನು ಆಯ್ಕೆ ಮಾಡಿರುವ ಮಾನದಂಡಗಳ ಕುರಿತು ಕಟುವಾಗಿ ಟೀಕಿಸಿದ ಆಪ್ ನಾಯಕರೂ ಆದ ಮಾನ್, “ಇದು ಅಕ್ರಮ ವಲಸಿಗರನ್ನು ಅವರ ತವರು ರಾಜ್ಯಗಳಿಗೆ ಕಳಿಸುವುದಾಗಿದ್ದರೆ, ಮೊದಲ ವಿಮಾನವೇಕೆ ಅಹಮದಾಬಾದ್ ನಲ್ಲಿ ಇಳಿಯಲಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮ ವದಂತಿಗಳನ್ನು ಹರಡಲು ಹಾಗೂ ಪಂಜಾಬ್ ನ ಹೆಸರಿಗೆ ಮಸಿ ಬಳಿಯಲೆಂದೇ ಅಮೃತಸರವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಗಡೀಪಾರು ವಿಮಾನಗಳು ಅಮೃತಸರದಲ್ಲಿ ಬಂದಿಳಿಯುತ್ತಿರುವ ಬಗ್ಗೆ ಪಂಜಾಬ್ ನಲ್ಲಿ ರಾಜಕೀಯ ವಿವಾದ ಸೃಷ್ಟಿಯಾಗಿದ್ದು, ಕೇಂದ್ರದ ನಿರ್ಧಾರವನ್ನು ಟೀಕಿಸುತ್ತಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ರೊಂದಿಗೆ ವಿರೋಧ ಪಕ್ಷಗಳೂ ಜತೆಗೂಡಿವೆ. ಕೇಂದ್ರ ಸರಕಾರದ ಈ ಕ್ರಮವನ್ನು ಕಾಂಗ್ರೆಸ್ ಶಾಸಕ ಪರ್ಗತ್ ಸಿಂಗ್ ಹಾಗೂ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಕನ್ವರ್ ಸಂಧು ಕೂಡಾ ಪ್ರಶ್ನಿಸಿದ್ದಾರೆ.
ಆದರೆ, ವಿರೋಧ ಪಕ್ಷಗಳ ಆರೋಪಗಳನ್ನು ಅಲ್ಲಗಳೆದಿರುವ ಪಂಜಾಬ್ ಬಿಜೆಪಿ ಮುಖ್ಯಸ್ಥ, ಸುನೀಲ್ ಝಾಖಡ್, ವಿರೋಧ ಪಕ್ಷಗಳು ಅನಗತ್ಯವಾಗಿ ಈ ವಿಷಯವನ್ನು ದೊಡ್ಡದಾಗಿಸುತ್ತಿವೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.