×
Ad

ಹೆದ್ದಾರಿಯಲ್ಲಿ 40 ಗಂಟೆಗಳ ಟ್ರಾಫಿಕ್ ಜಾಮ್! ; ʼಇಷ್ಟು ಬೇಗ ಯಾಕೆ ಮನೆಯಿಂದ ಹೊರಟಿರಿʼ ಎಂದು ಪ್ರಶ್ನಿಸಿ ದಿಗ್ಭ್ರಮೆಗೊಳಿಸಿದ NHAI ಪರ ವಕೀಲರು!

Update: 2025-07-01 22:09 IST

ಸಾಂದರ್ಭಿಕ ಚಿತ್ರ | PC : PC : NDTV


ಭೋಪಾಲ್: ಶುಕ್ರವಾರ ಇಂದೋರ್-ದೇವಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ 40 ಗಂಟೆಗಳ ಸುದೀರ್ಘ ಕಾಲದ ಸಂಚಾರ ದಟ್ಟಣೆಯಲ್ಲಿ ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಾದ ಮಂಡಿಸಿದ ವಕೀಲರು, “ನೀವು ಇಷ್ಟು ಬೇಗ ಯಾಕೆ ಮನೆಯಿಂದ ಹೊರಟಿರಿ?” ಎಂದು ವಾಹನ ಸವಾರರನ್ನು ಪ್ರಶ್ನಿಸುವ ಮೂಲಕ, ನ್ಯಾಯಾಲಯದಲ್ಲಿ ನೆರೆದಿದ್ದವರನ್ನು ದಿಗ್ಭ್ರಾಂತಗೊಳಿಸಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದೆದುರು ವಾದ ಮಂಡಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರು, “ನೀವೇಕೆ ಕೆಲಸವಿಲ್ಲದೆ ಮನೆಯಿಂದ ಹೊರಗೆ ಕಾಲಿಡುತ್ತೀರಿ?” ಎಂದು ಪ್ರಶ್ನಿಸುವ ಮೂಲಕ ನ್ಯಾಯಾಲಯದಲ್ಲಿ ನೆರೆದಿದ್ದವರನ್ನು ಸ್ತಂಭೀಭೂತರನ್ನಾಗಿಸಿದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರ ಈ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಗಿರೀಶ್ ಪಟವರ್ಧನ್, “ಈ ಹೇಳಿಕೆಯನ್ನು ನ್ಯಾಯಾಲಯದಲ್ಲಿ ನೀಡಲಾಗಿದೆ. ಸಾಮಾನ್ಯ ನಾಗರಿಕರು ಇನ್ನು ಮುಂದೆ ಸುರಕ್ಷಿತವಾಗಿ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಮಾನ್ಯ ನ್ಯಾಯಾಲಯವು ಇಂತಹ ಕಾರಣಗಳು ಅಸ್ವೀಕಾರಾರ್ಹ ಎಂದು ಹೇಳಿದೆ. ಆದರೆ, ನ್ಯಾಯಾಲಯವು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಇಂದೋರ್-ದೇವಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಸಂಚಾರ ದಟ್ಟಣೆಯಲ್ಲಿ ಮೂವರು ಮೃತಪಟ್ಟಿದ್ದರಿಂದ, ದೇವಾಸ್ ನಿವಾಸಿಯಾದ ವಕೀಲ ಆನಂದ್ ಅಧಿಕಾರಿ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವರೂ ಕೂಡಾ ಇಂದೋರ್ ತಲುಪುವ ಪ್ರಯತ್ನದಲ್ಲಿ ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು. ಸೋಮವಾರ ಅವರು ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ವಿವೇಕ್ ರೂಸಿಯಾ ಹಾಗೂ ನ್ಯಾ. ಬಿನೋದ್ ಕುಮಾರ್ ದ್ವಿವೇದಿ ಅವರನ್ನೊಳಗೊಂಡಿದ್ದ ನ್ಯಾಯಪೀಠ ನಡೆಸಿತು.

ಈ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ದಿಲ್ಲಿ ಮತ್ತು ಇಂದೋರ್ ಕಚೇರಿಗಳು), ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಇಂದೋರ್ ಜಿಲ್ಲಾಧಿಕಾರಿ, ಇಂದೋರ್ ಪೊಲೀಸ್ ಆಯುಕ್ತರು, ರಸ್ತೆ ನಿರ್ಮಾಣ ಸಂಸ್ಥೆ ಹಾಘೂ ಇಂದೋರ್ ದೇವಾಸ್ ಟೋಲ್ ವೇಸ್ ಲಿಮಿಟೆಡ್ ಸೇರಿದಂತೆ ಹಲವರನ್ನು ನ್ಯಾಯಾಲಯ ಪ್ರತಿವಾದಿಗಳನ್ನಾಗಿಸಿದೆ.

ಈ ಹಿಂದೆ, ಸೆಪ್ಟೆಂಬರ್ ತಿಂಗಳಲ್ಲಿಯೇ ನಾಲ್ಕು ವಾರಗಳೊಳಗಾಗಿ ತಿರುವು ರಸ್ತೆಯ ನಿರ್ಮಾಣವನ್ನು ಸಂಪೂರ್ಣಗೊಳಿಸುವಂತೆ ಈಗಾಗಲೇ ತಾನು ನೀಡಿದ್ದ ಆದೇಶವನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು.

ಹೀಗಿದ್ದೂ, ರಸ್ತೆ ಈವರೆಗೆ ಪೂರ್ಣಗೊಂಡಿಲ್ಲ. ಇದಕ್ಕೆ 10 ದಿನಗಳ ಕಾಲ ನಡೆದ ಗಣಿಗಾರಿಕೆ ಕಾರ್ಮಿಕರ ಮುಷ್ಕರ ಕಾರಣ ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ದೂಷಿಸಿತು. ಅಲ್ಲದೆ, ತಾನು ಈ ಹಿಂದೆಯೇ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಮೂರರಿಂದ ನಾಲ್ಕು ತಿಂಗಳ ಕಾಲಾವಧಿ ಕೋರಿದ್ದ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿತು. ಆದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮಜಾಯಿಷಿಯಿಂದ ಅತೃಪ್ತಗೊಂಡಂತೆ ಕಂಡು ಬಂದ ನ್ಯಾಯಾಲಯ, ಇಂತಹ ವಿಳಂಬಗಳ ಹಿಂದಿರುವ ತರ್ಕವೇನು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಹಾಜರಿದ್ದ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.

ನಂತರ, ಪ್ರಕರಣದ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದ ನ್ಯಾಯಾಲಯ, ಎಲ್ಲ ಪ್ರತಿವಾದಿಗಳು ತಮ್ಮ ಲಿಖಿತ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News