×
Ad

ಪ್ರೇಮಸಂಬಂಧ ಶಂಕಿಸಿದ ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಕೊಲೆ

Update: 2024-01-21 07:58 IST

ಮರ್ಮಗೋವಾ: ಪತಿಯ ವಿವಾಹೇತರ ಸಂಬಂಧದ ಬಗ್ಗೆ ಸಂದೇಹಗೊಂಡು ಜಗಳ ತೆಗೆದ ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಹತ್ಯೆ ಮಾಡಿದ ಆರೋಪದಲ್ಲಿ ದಕ್ಷಿಣ ಗೋವಾದ ವಿಲಾಸಿ ಹೋಟೆಲ್‍ನ ವ್ಯವಸ್ಥಾಪಕನೊಬ್ಬನನ್ನು ಬಂಧಿಸಲಾಗಿದೆ.

ಆರೋಪಿ ಗೌರವ್ ಕಟಿಯಾರ್ (29) ಮೂಲತಃ ಉತ್ತರಪ್ರದೇಶದ ಲಕ್ನೋದವನಾಗಿದ್ದು, ಕೋಲ್ವಾದಲ್ಲಿ ಮ್ಯಾರಿಯಟ್ ಕಂಟ್ರಿಯಾರ್ಡ್‍ನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ದೀಕ್ಷಾ ಗಂಗ್ವಾರ್ (27) ಜತೆ ಈತನ ವಿವಾಹ ಒಂದು ವರ್ಷದ ಹಿಂದೆ ಆಗಿದ್ದು, ಇಬ್ಬರ ಸಂಬಂಧ ಹಳಸಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಶಂಕೆಯಿಂದ ಜಗಳ ತೆಗೆದ ಪತ್ನಿಯನ್ನು ಕಾಣಕೋಣದ ಕ್ಯಾಬೊ ಡೇ ರಾಮಾ ಬೀಚ್‍ನಲ್ಲಿ ಮುಳುಗಿಸಿ ಸಾಯಿಸಿದ್ದಾಗಿ ಆರೋಪಿಸಲಾಗಿದೆ.

ಒಂದು ತಿಂಗಳ ಹಿಂದೆ ಗೌರವ್ ಚೆನ್ನೈನಿಂದ ಗೋವಾಗೆ ಆಗಮಿಸಿದ್ದ. ಪತಿ ಸ್ಥಳಾಂತರಗೊಂಡ ಬಳಿಕ ಲಕ್ನೋದಲ್ಲಿದ್ದ ದೀಕ್ಷಾ ಕೂಡಾ ಗೋವಾಕ್ಕೆ ಆಗಮಿಸಿದ್ದಳು. ಪತಿ ಜತೆಗೆ ವಾಸವಿದ್ದ ಸಂದರ್ಭ, ಗೌರವ್‍ಗೆ ವಿವಾಹೇತರ ಸಂಬಂಧ ಇದೆ ಎಂಬ ಶಂಕೆ ಬಲವಾಯಿತು ಹಾಗೂ ಇಬ್ಬರ ನಡುವೆ ಪದೇ ಪದೇ ವಾಗ್ವಾದ ನಡೆಯುತ್ತಿತ್ತು ಎಂದು ಮೂಲಗಳು ಹೇಳಿವೆ.

ಶುಕ್ರವಾರ ಬಾಡಿಗೆ ದ್ವಿಚಕ್ರವಾಹನದಲ್ಲಿ ಪತ್ನಿಯನ್ನು ಬೀಚ್‍ಗೆ ಕರೆದೊಯ್ದು ಬೀಚ್ ಬಳಿಯ ಕಲ್ಲಿನಲ್ಲಿ ಸಮಯ ಕಳೆದಿದ್ದರು. "ಈ ದಂಪತಿ ನೀರಿಗೆ ಇಳಿಯುತ್ತಿರುವುದನ್ನು ಕೆಲ ಪ್ರವಾಸಿಗಳು ನೋಡಿದ್ದಾರೆ. ಆದರೆ ಕೆಲ ಸಮಯದ ಬಳಿಕ ಗೌರವ್ ಮಾತ್ರ ಮೇಲೆ ಬರುತ್ತಿರುವುದು ನೋಡಿ ಆತನ ಬಗ್ಗೆ ಸಂದೇಹಪಟ್ಟಿದ್ದರು" ಎಂದು ಡಿಎಸ್ಪಿ ಸಂತೋಷ್ ದೇಸಾಯಿ ಹೇಳಿದ್ದಾರೆ. ಮಹಿಳೆಯ ದೇಹ ತೇಲುತ್ತಿದ್ದುದನ್ನು ಕಂಡ ಪ್ರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಗೌರವ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊದಲು ಪತ್ನಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿ ಹೇಳಿದ. ಆದರೆ ಪೊಲೀಸರು ತನಿಖೆ ನಡೆಸಿದಾಗ, ಪತ್ನಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡ. ಮೃತದೇಹದ ಮೇಲೆ ಉಸಿರುಗಟ್ಟಿಸಿದ ಗುರುತು ಮತ್ತು ಇತರ ಗಾಯಗಳಿವೆ. ಇದು ಮಹಿಳೆಯ ಸಾವಿಗೆ ಮುನ್ನ ದಂಪತಿ ನಡುವೆ ಜಗಳ ನಡೆದಿತ್ತು ಎನ್ನುವುದಕ್ಕೆ ಸಾಕ್ಷಿ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News