ನಿವೃತ್ತಿಯ ಬಳಿಕ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ: ನಿಯೋಜಿತ ಸಿಜೆಐ ನ್ಯಾ.ಬಿ.ಆರ್. ಗವಾಯಿ
ನ್ಯಾ.ಬಿ.ಆರ್. ಗವಾಯಿ | PTI
ಹೊಸದಿಲ್ಲಿ: ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ತಾನು ತಿರಸ್ಕರಿಸುವುದಾಗಿ ಇನ್ನೆರಡು ದಿನಗಳಲ್ಲಿ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಾಗಿ ಅಧಿಕಾರ ಸ್ವೀಕರಿಸಲಿರುವ ನ್ಯಾ.ಬಿ.ಆರ್. ಗವಾಯಿ ಅವರು ಹೇಳಿದ್ದಾರೆ.
ನ್ಯಾ.ಗವಾಯಿ ತನ್ನ ನಿವಾಸದಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕ ಮಾತುಕತೆ ವೇಳೆ, ‘ನನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ. ನಿವೃತ್ತಿ ನಂತರ ಯಾವುದೇ ಹುದ್ದೆಗಳನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ಹೇಳಿದರು.
ಮಾಜಿ ಸಿಜೆಐ ಓರ್ವರು ರಾಜ್ಯಪಾಲರ ಹುದ್ದೆಯನ್ನು ಸ್ವೀಕರಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದಾಗ, ’ಇತರರ ಪರವಾಗಿ ನಾನು ಮಾತನಾಡಲು ಸಾಧ್ಯವಿಲ್ಲ’ ಎಂದರು. ಆದರೆ, ಶಿಷ್ಟಾಚಾರದಲ್ಲಿ ರಾಜ್ಯಪಾಲರ ಹುದ್ದೆಯು ಸಿಜೆಐ ಹುದ್ದೆಗಿಂತ ಕೆಳಗಿನದಾಗಿದೆ ಎಂದು ಅವರು ಹೇಳಿದರು.
2013ರಿಂದ 2014ರವರೆಗೆ ಸಿಜೆಐ ಆಗಿದ್ದ ನ್ಯಾ.ಪಿ.ಸದಾಶಿವಂ ಅವರನ್ನು 2014ರಲ್ಲಿ ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು ಮತ್ತು ಅವರು 2019ರವರೆಗೆ ಹುದ್ದೆಯಲ್ಲಿದ್ದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾ.ಎಸ್ ಅಬ್ದುಲ್ ನಝೀರ್ ಅವರು 2023ರಲ್ಲಿ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಮಾಜಿ ಸಿಜೆಐ ರಂಜನ್ ಗೊಗೊಯಿ ಅವರನ್ನು ನಿವೃತ್ತಿಯ ಬಳಿಕ 2020ರಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿತ್ತು.
ನ್ಯಾಯಾಧೀಶರು ರಾಜಕಾರಣಿಗಳು ಸೇರಿದಂತೆ ಇತರರನ್ನು ಭೇಟಿಯಾಗುವ ಕುರಿತು ಪ್ರಶ್ನೆಗೆ ನ್ಯಾ.ಗವಾಯಿ, ನ್ಯಾಯಾಧೀಶರು ದಂತದ ಗೋಪುರಗಳಲ್ಲಿ ವಾಸಿಸುವುದಿಲ್ಲ. ಜೀವನದ ವಿವಿಧ ರಂಗಗಳ ಜನರನ್ನು ಭೇಟಿಯಾಗದಿದ್ದರೆ ಅವರನ್ನು ಕಾಡುತ್ತಿರುವ ಸಮಸ್ಯೆಗಳು ನಿಮಗೆ ಅರ್ಥವಾಗುವುದಿಲ್ಲ ಎಂದು ಉತ್ತರಿಸಿದರು.