×
Ad

ಉತ್ತರಪ್ರದೇಶದಲ್ಲಿ ತೋಳಗಳ ದಾಳಿ: 8 ಸಾವು

Update: 2024-08-29 21:09 IST

PC : PTI

ಲಕ್ನೋ: ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಇತ್ತೀಚೆಗೆ ತೋಳಗಳ ದಾಳಿಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಿಗೇ, ಈ ದಾಳಿಗಳನ್ನು ನಡೆಸಿರುವ ತೋಳಗಳನ್ನು ಹಿಡಿಯಲು ಜಿಲ್ಲಾ ಅರಣ್ಯ ಇಲಾಖೆಯು ‘‘ಆಪರೇಶನ್ ಭೆಡಿಯ’’ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಾರ್ಯಾಚರಣೆಯಲ್ಲಿ ಈವರೆಗೆ ನಾಲ್ಕು ತೋಳಗಳನ್ನು ಹಿಡಿಯಲಾಗಿದೆ. ಎರಡು ತೋಳಗಳು ಈಗಲೂ ಹೊರಗೆ ತಿರುಗಾಡುತ್ತಿವೆ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅವುಗಳನ್ನೂ ಹಿಡಿಯಲು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಅರಣ್ಯಾಧಿಕಾರಿಗಳು ಒಂದು ತೋಳವನ್ನು ಸೆರೆಹಿಡಿದು ಮೃಗಾಲಯದಲ್ಲಿ ಬಿಟ್ಟಿದ್ದಾರೆ.

ಮೆಹ್ಸಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 45 ದಿನಗಳ ಅವಧಿಯಲ್ಲಿ ತೋಳಗಳ ಗುಂಪೊಂದು ನಡೆಸಿರುವ ಸರಣಿ ಆಕ್ರಮಣಗಳಲ್ಲಿ ಆರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ.

‘‘ತುಂಬಾ ಸಮಯದಿಂದಿ ಇಲ್ಲಿ ತೋಳಗಳ ಹೆದರಿಕೆ ಇತ್ತು. ಇಂದು ನಾವು ಒಂದು ತೋಳವನ್ನು ಹಿಡಿದಿದ್ದೇವೆ. ಅದನ್ನು ನಾವು ಮೃಗಾಲಯಕ್ಕೆ ಒಯ್ಯುತ್ತೇವೆ. ಈವರೆಗೆ ನಾಲ್ಕು ತೋಳಗಳನ್ನು ಹಿಡಿಯಲಾಗಿದೆ. ಇನ್ನೂ ಎರಡು ತೋಳಗಳು ಹೊರಗಿವೆ. ಅವುಗಳನ್ನು ಹಿಡಿಯಲು ಸಿದ್ಧತೆಗಳು ನಡೆಯುತ್ತಿವೆ’’ ಎಂದು ಮಧ್ಯ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರೇಣು ಸಿಂಗ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

‘ಆಪರೇಶನ್ ಭೆಡಿಯ’ ಕಾರ್ಯಾಚರಣೆಯಡಿ ಬ್ರಹ್ರೈಚ್ ಅರಣ್ಯ ಇಲಾಖೆಯು ತೋಳಗಳ ಜಾಡು ಪತ್ತೆಹಚ್ಚಲು ಡ್ರೋನ್ ಕ್ಯಾಮರಾಗಳನ್ನು ನಿಯೋಜಿಸಿದೆ ಮತ್ತು ‘ಥರ್ಮಲ್ ಮ್ಯಾಪಿಂಗ್’ ತಂತ್ರಜ್ಞಾನವವನ್ನು ಬಳಸಿದೆ.

ಅರಣ್ಯ ಸಚಿವ ಅರುಣ್ ಸಕ್ಸೇನ ಬುಧವಾರ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾದರು.

‘‘ನಾಲ್ವರು ಮೃತರ ಸಂಬಂಧಿಕರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ. ಉಳಿದ ಸಂತ್ರಸ್ತ ಕುಟುಂಬಗಳಿಗೆ ನೀಡಬೇಕಾದ ಪರಿಹಾರದ ಪ್ರಕ್ರಿಯೆ ಚಾಲ್ತಿಯಲ್ಲಿದೆ’’ ಎಂದು ಜಿಲ್ಲಾಡಳಿತ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ತೋಳಗಳನ್ನು ಸೆರೆಹಿಡಿಯಲು ನಾವು 16 ತಂಡಗಳನ್ನು ನಿಯೋಜಿಸಿದ್ದೇವೆ. 12 ಜಿಲ್ಲಾ ಮಟ್ಟದ ಅಧಿಕಾರಿಗಳನ್ನೂ ಅಲ್ಲಿಗೆ ನಿಯೋಜಿಸಲಾಗಿದೆ. ಉಳಿದ ತೋಳಗಳನ್ನು ಸೆರೆಹಿಡಿಯುವವರೆಗೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರೇಣು ಸಿಂಗ್ ಸ್ಥಳದಲ್ಲಿರುತ್ತಾರೆ’’ ಎಂದು ಪ್ರೆಧಾನ ಮುಖ್ಯ ಅರಣ್ಯ ಸಂರಕ್ಷಣಧಿಕಾರಿ ಸಂಜಯರ್ ಶ್ರೀವಾಸ್ತವ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News