ಕರ್ಣಿ ಸೇನಾ ಮುಖ್ಯಸ್ಥ ಗೊಗಾಮೆದಿ ಹತ್ಯೆಗೆ ಸಂಬಂಧಿಸಿ ಜೈಪುರದಲ್ಲಿ ಮಹಿಳೆಯ ಬಂಧನ
ಸುಖದೇವ ಸಿಂಗ್ ಗೊಗಾಮೆದಿ | Photo: ANI
ಜೈಪುರ: ಕರ್ಣಿ ಸೇನಾ ಮುಖ್ಯಸ್ಥ ಸುಖದೇವ ಸಿಂಗ್ ಗೊಗಾಮೆದಿ ಹತ್ಯೆ ಕುರಿತು ನಡೆಯುತ್ತಿರುವ ತನಿಖೆಯ ನಡುವೆಯೇ ಜೈಪುರ ಪೋಲಿಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಜಾಲದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಪೂಜಾ ಸೈನಿ ಎಂಬಾಕೆಯನ್ನು ಸೋಮವಾರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರ ತಡರಾತ್ರಿ ರಾಜಸ್ಥಾನ ಮತ್ತು ದಿಲ್ಲಿ ಪೋಲಿಸರು ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಶಾರ್ಪ್ಶೂಟರ್ಗಳು ಸೇರಿದಂತೆ ಮೂವರು ಆರೋಪಿಗಳನ್ನು ಚಂಡಿಗಡದಲ್ಲಿ ಬಂಧಿಸಿದ್ದರು. ಅವರನ್ನು ಜೈಪುರಕ್ಕೆ ಕರೆತಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಏಳು ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಲಾಗಿದೆ.
ಜೈಪುರ ಪೋಲಿಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ತಿಳಿಸಿರುವಂತೆ ಪೂಜಾ ಸೈನಿ ಮತ್ತು ಆಕೆಯ ಪತಿ ಮಹೇಂದ್ರ ಮೇಘ್ವಾಲ್ ಮೂವರು ಆರೋಪಿಗಳ ಪೈಕಿ ಓರ್ವನಾದ ನಿತಿನ್ ಫೌಝಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರು. ಡಿ.5ರಂದು ಗೊಗಾಮೆದಿ ಹತ್ಯೆಯನ್ನು ನಡೆಸುವ ಮುನ್ನ ಫೌಝಿ ಜೈಪುರದ ಜಗತ್ಪುರ ಪ್ರದೇಶದಲ್ಲಿಯ ಸೈನಿ ಮತ್ತು ಮೇಘ್ವಾಲ್ ಅವರ ಬಾಡಿಗೆಯ ಫ್ಲ್ಯಾಟಿನಲ್ಲಿ ಸುಮಾರು ಒಂದು ವಾರ ಕಾಲ ವಾಸವಾಗಿದ್ದ.
ಫೌಝಿ ನ.28ರಂದು ಟ್ಯಾಕ್ಸಿಯೊಂದರಲ್ಲಿ ಜೈಪುರಕ್ಕೆ ಆಗಮಿಸಿ ಮೇಘ್ವಾಲ್ ನನ್ನು ಭೇಟಿಯಾಗಿದ್ದ. ಮೇಘ್ವಾಲ್ ಆತನನ್ನು ಜಗತ್ಪುರದ ತನ್ನ ಫ್ಲ್ಯಾಟಿಗೆ ಕರೆದೊಯ್ದಿದ್ದ ಎಂದು ಹೆಚ್ಚುವರಿ ಪೋಲಿಸ್ ಆಯುಕ್ತ ಕೈಲಾಶ್ಚಂದ್ರ ಬಿಷ್ಣೋಯಿ ತಿಳಿಸಿದರು.
ಮಾಧ್ಯಮ ವರದಿಗಳಂತೆ ಮೇಘ್ವಾಲ್ ತನ್ನ ಬಳಿ ಆರಕ್ಕೂ ಹೆಚ್ಚಿನ ಪಿಸ್ತೂಲುಗಳು ಮತ್ತು ಗುಂಡುಗಳನ್ನು ಹೊಂದಿದ್ದ. ಫೌಜಿ ಆತನಿಂದ ತನಗಾಗಿ ಎರಡು ಪಿಸ್ತೂಲುಗಳು ಮತ್ತು ಎರಡು ಮ್ಯಾಗಝಿನ್ ಗಳನ್ನು ಹಾಗೂ ಇನ್ನೋರ್ವ ಶಾರ್ಪ್ಶೂಟರ್ ರೋಹಿತ ರಾಠೋಡ್ ಗಾಗಿ ಒಂದು ಪಿಸ್ತೂಲು ಮತ್ತು ಎರಡು ಮ್ಯಾಗಝಿನ್ ಗಳನ್ನು ಪಡೆದುಕೊಂಡಿದ್ದ.
ಡಿ.5ರಂದು ಮೇಘ್ವಾಲ್ ಫೌಝಿಯನ್ನು ಅಜ್ಮೇರ್ ರಸ್ತೆಗೆ ತಂದು ಬಿಟ್ಟಿದ್ದು, ಅಲ್ಲಿ ರಾಠೋಡ್ ಆತನಿಗಾಗಿ ಕಾಯುತ್ತಿದ್ದ. ಶಸ್ತ್ರಸಜ್ಜಿತರಾಗಿದ್ದ ಫೌಜಿ ಮತ್ತು ರಾಠೋಡ್ರನ್ನು ಬಳಿಕ ವಾಹನದಲ್ಲಿ ಶ್ಯಾಮನಗರ ಪ್ರದೇಶದಲ್ಲಿಯ ಗೊಗಾಮೆದಿ ನಿವಾಸಕ್ಕೆ ತಲುಪಿಸಲಾಗಿತ್ತು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.