ಸುಸೈಡ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ; ಐಎಎಸ್ ಅಧಿಕಾರಿಯ ಬಂಧನ
ಸಾಂದರ್ಭಿಕ ಚಿತ್ರ | Photo Credit : freepik.com
ಗುವಾಹಟಿ, ಅ. 27: ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅರುಣಾಚಲಪ್ರದೇಶದ ಐಎಎಸ್ ಅಧಿಕಾರಿ ತಾಲೋ ಪೋಟೋಮ್ ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಯುವತಿಯೋರ್ವಳು ತಾಲೋ ಪೋಟೋಮ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸುಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.
ಪ್ರಸ್ತುತ ದಿಲ್ಲಿ ಸರಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೋಟೋಮ್ ಅರುಣಾಚಲಪ್ರದೇಶ ಪೊಲೀಸರ ಮುಂದೆ ಸೋಮವಾರ ಮುಂಜಾನೆ ಶರಣಾಗತರಾಗಿದ್ದಾರೆ. ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿತ್ತು.
19 ವರ್ಷದ ಯುವತಿ ಗೊಮ್ಚು ಯೆಕಾರ್ ಅವರ ಮೃತದೇಹ ಪಾಪುಮ್ ಪಾರೆ ಜಿಲ್ಲೆಯ ಲೇಖಿ ಗ್ರಾಮದಲ್ಲಿರುವ ಆಕೆಯ ಬಾಡಿಗೆ ಮನೆಯಲ್ಲಿ ಅಕ್ಟೋಬರ್ 23ರಂದು ಪತ್ತೆಯಾಗಿತ್ತು. ಆಕೆಯ ತಂದೆ ಎಫ್‌ಐಆರ್ ದಾಖಲಿಸಿದ ಬಳಿಕ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು.
ಮನೆಯಲ್ಲಿ ಪತ್ತೆಯಾಗಿರುವ ಹಲವು ಸುಸೈಡ್ ನೋಟ್ ನಲ್ಲಿ ತನ್ನ ಸಾವಿಗೆ ಇಬ್ಬರು ಹಿರಿಯ ಅಧಿಕಾರಿಗಳು ಹೊಣೆ ಎಂದು ಗೊಮ್ಚು ಯೇಕರ್ ಆರೋಪಿಸಿರುವುದಾಗಿ ಆಕೆಯ ತಂದೆ ಪ್ರತಿಪಾದಿಸಿದ್ದಾರೆ.
ಐಎಎಸ್ ಅಧಿಕಾರಿ ಪೋಟೋಮ್ ಹಾಗೂ ಹಿರಿಯ ಎಂಜಿನಿಯರ್ ಲಿಕ್ವಾಂಗ್ ಲೊವಾಂಗ್ ತನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ದೀರ್ಘ ಕಾಲ ಕಿರುಕುಳ ನೀಡಿದ್ದಾರೆ ಎಂದು ಯೇಕರ್ ಆರೋಪಿಸಿದ್ದಾರೆ. ದೀರ್ಘ ಕಾಲದ ಅವಮಾನ, ಬಲವಂತ ಹಾಗೂ ಬೆದರಿಕೆಗಳಿಂದ ತಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಯೇಕರ್ ಆತ್ಮಹತ್ಯೆ ಮಾಡಿಕೊಂಡ ಗಂಟೆಗಳ ಬಳಿಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಿಕ್ವಾಂಗ್ ಲೊವಾಂಗ್ ತಿರಪ್ ಜಿಲ್ಲೆಯಲ್ಲಿರುವ ತನ್ನ ಖೋನ್ಸಾ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರು ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಭ್ರಷ್ಟಾಚಾರ ಆರೋಪಿಸಿ ಎಫ್‌ಐಆರ್ ದಾಖಲಿಸಲಾಗಿದೆ.