ಮಹಾರಾಷ್ಟ್ರ: ಮಹಿಳೆ, ಮೂವರು ಅಪ್ರಾಪ್ತ ಪುತ್ರಿಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
ಮುಂಬೈ: ಮೂವರು ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಮಹಿಳೆಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿ ತಾಲೂಕಿನಲ್ಲಿ ನಡೆದಿದೆ. ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಮಹಿಳೆಯ ಪತಿ, ವಿದ್ಯುತ್ ಮಗ್ಗದ ಕೆಲಸಗಾರ ಲಾಲ್ಜಿ ಭಾರ್ತಿ ಬೆಳಿಗ್ಗೆ ಕೆಲಸದಿಂದ ಮನೆಗೆ ಬಂದು ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿಯ ಮೂಲಕ ಒಳಗೆ ನೋಡಿದಾಗ, ತನ್ನ ಪತ್ನಿ ಮತ್ತು ಹೆಣ್ಣುಮಕ್ಕಳು ಸೀಲಿಂಗ್ ನಲ್ಲಿ ನೇತಾಡುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ನೆರೆಹೊರೆಯವರಿಗೆ ಈ ವಿಷಯ ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಬಂದು ಬಾಗಿಲು ಒಡೆದು ಮೃತ ದೇಶಗಳನ್ನು ಕೆಳಗಿಳಿಸಿದ್ದಾರೆ. ಮಹಿಳೆಯನ್ನು ಪುನಿತಾ ಲಾಲ್ಜಿ ಭಾರ್ತಿ (30), ಹೆಣ್ಣುಮಕ್ಕಲನ್ನು ನಂದಿನಿ (13), ನೇಹಾ (12) ಮತ್ತು ಅನು (8) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಮೃತದೇಹಗಳನ್ನು ಭೀವಂಡಿಯ ಇಂದಿರಾ ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದೇವೆ" ಎಂದು ಭೀವಂಡಿಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕ್ರಿಲುಶ್ ದೇವ್ ಖರಾಡೆ ಮಾಹಿತಿ ನೀಡಿದರು.
ಕುಟುಂಬವು ಸಾಲದ ಸುಳಿಯಲ್ಲಿ ಸಿಲುಕಿದ್ದು, ಮಹಿಳೆ ಆತ್ಮಹತ್ಯೆ ಪತ್ರದಲ್ಲಿ ಭಾರೀ ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ಉಲ್ಲೇಖಿಸಿದ್ದಾರೆ. ಅವರ ಪತಿ ಕೂಡ ಪೊಲೀಸರಿಗೆ ಅದನ್ನು ದೃಢಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು The Indian Expressಗೆ ತಿಳಿಸಿದ್ದಾರೆ.
ಮಹಿಳೆ ಮೊದಲು ತನ್ನ ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಮಹಿಳೆ ಪುನಿತಾ ಟೈಲರಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಪತ್ರದಲ್ಲಿ ಮಹಿಳೆಯು ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.