ನೀವು 10 ವರ್ಷ ಅಧಿಕಾರದಲ್ಲಿದ್ದರೂ ಭ್ರಷ್ಟಾಚಾರ ನಿರ್ಮೂಲನೆ ಏಕೆ ಸಾಧ್ಯವಾಗಲಿಲ್ಲ: ಪ್ರಧಾನಿ ಸ್ವಾತಂತ್ರ್ಯ ಭಾಷಣಕ್ಕೆ ಸಿಬಲ್ ತಿರುಗೇಟು
ಕಪಿಲ್ ಸಿಬಲ್ (ANI) / ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ಆಡಿದ್ದ ಮಾತಿಗೆ ತಿರುಗೇಟು ನೀಡಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಅಚ್ಛೆ ದಿನ್ ಎಲ್ಲಿದೆ? ಹಾಗೂ ನಿಮ್ಮ ಬಳಿ ಬಹುತೇಕ ಹತ್ತು ವರ್ಷಗಳ ಅವಧಿಯಿದ್ದರೂ ಭ್ರಷ್ಟಾಚಾರ ನಿರ್ಮೂಲನೆ ಏಕೆ ಸಾಧ್ಯವಾಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಿಬಲ್, “ಆಗಸ್ಟ್ 15ರಂದು ಪ್ರಧಾನ ಮಂತ್ರಿಗಳು ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಿದೆ ಎಂದು ಹೇಳಿದ್ದಾರೆ. ಆದರೆ, ನಿಮ್ಮ ಬಳಿ ಬಹುತೇಕ 10 ವರ್ಷಗಳ ಅವಧಿ ಇತ್ತು. ಏನಾಯಿತು? ಎಲ್ಲಿವೆ ಅಚ್ಛೆ ದಿನಗಳು. ಮರೆತುಬಿಟ್ಟಿರಾ? ಹಣದುಬ್ಬರವನ್ನು ಆಮದು ಮಾಡಿಕೊಳ್ಳಲಾಯಿತು. ಆದರೆ, ನಮ್ಮ ತರಕಾರಿಗಳನ್ನಲ್ಲ!” ಎಂದು ಕುಟುಕಿದ್ದಾರೆ.
“ಮುಂದಿನ ಐದು ವರ್ಷ ಯಾರಿಗೆ ಸುವರ್ಣ ಯುಗ? ಬಡವರು, ದಲಿತರು, ಅಲ್ಪಸಂಖ್ಯಾತರು ಅಥವಾ?” ಎಂದು ಅವರು ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
ಯುಪಿಎ-1 ಹಾಗೂ ಯುಪಿಎ-2ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಕಪಿಲ್ ಸಿಬಲ್, ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು, ಸಮಾಜವಾದಿ ಪಕ್ಷದ ಬೆಂಬಲದಿಂದ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಅವರು ಅನ್ಯಾಯದ ವಿರುದ್ಧ ಹೋರಾಡಲು ರಾಜಕೀಯೇತರ ವೇದಿಕೆಯಾದ ‘ಇನ್ಸಾಫ್’ ಅನ್ನು ಸ್ಥಾಪಿಸಿದ್ದರು.
2024ರ ಚುನಾವಣೆಯಲ್ಲಿ ಮರು ಆಯ್ಕೆಯನ್ನು ಬಯಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯಂದು ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ವಂಶಪಾರಂಪರ್ಯ ಆಡಳಿತವೆಂಬ ಮೂರು ಕೇಡುಗಳ ವಿರುದ್ಧ ಹೋರಾಡುವಂತೆ ಜನತೆಗೆ ಕರೆ ನೀಡಿದ್ದರು. ಇದರೊಂದಿಗೆ ಮುಂದಿನ ವರ್ಷ ನಾನು ಮತ್ತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲು ಕೆಂಪು ಕೋಟೆಗೆ ಮರಳಿ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.