×
Ad

ಸೇನಾ ವಶದಲ್ಲಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ ಪ್ರಕರಣ: ಕಸ್ಟಡಿ ಹತ್ಯೆ ಆರೋಪಿಸಿದ ಕುಟುಂಬ

Update: 2025-05-05 14:05 IST

Photo credit: PTI

ಶ್ರೀನಗರ: ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ಜೊತೆಗಿನ ನಂಟಿನ ಆರೋಪದಲ್ಲಿ ಬಂಧಿತ ಇಮ್ತಿಯಾಝ್‌ ಅಹ್ಮದ್ ಮಗ್ರೆ ಮೃತದೇಹ ಹೊಳೆಯೊಂದರಲ್ಲಿ ಪತ್ತೆಯಾಗಿತ್ತು. ಆತ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹೊಳೆಗೆ ಹಾರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಯುವಕನ ಕುಟುಂಬ ಇದು ಕಸ್ಟಡಿ ಹತ್ಯೆ ಎಂದು ಆರೋಪಿಸಿದೆ.

ಇಮ್ತಿಯಾಝ್ ಅಹ್ಮದ್ ಕುಟುಂಬ ಮತ್ತು ಸ್ಥಳೀಯ ನಿವಾಸಿಗಳ ಪ್ರಕಾರ, ಇಮ್ತಿಯಾಝ್‌ ಅಹ್ಮದ್ ಮಗ್ರೆ (23) ಅವರನ್ನು ಭಾರತೀಯ ಸೇನೆ ಕೆಲ ದಿನಗಳ ಹಿಂದೆ ವಶಕ್ಕೆ ತೆಗೆದುಕೊಂಡಿತ್ತು. ರವಿವಾರ ಅವರ ಮೃತದೇಹವನ್ನು ಪಕ್ಕದ ಹೊಳೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಮತ್ತು ಕಾನೂನು ವಿಧಿವಿಧಾನಗಳನ್ನು ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಪೊಲೀಸರು ಹೇಳಿದ್ದೇನು?:

ಲಷ್ಕರೆ ತೈಬಾ ಸದಸ್ಯನೆಂದು ಶಂಕಿಸಿ ಇಮ್ತಿಯಾಝ್‌ ಅಹ್ಮದ್‌ನನ್ನು ಬಂಧಿಸಲಾಗಿತ್ತು. ತನಿಖೆಯ ಭಾಗವಾಗಿ ಭಯೋತ್ಪಾದಕರ ಅಡಗುತಾಣಕ್ಕೆ ಪೊಲೀಸರು ಆತನನ್ನು ಕರೆತಂದಿದ್ದರು. ಆದರೆ ಆತ ವೇಗವಾಗಿ ಹರಿಯುವ ವೈಶೋ ಹೊಳೆಗೆ ಹಾರಿ ಪರಾರಿಯಾಗಲು ಯತ್ನಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಹೇಳಿದರು.

ಕಸ್ಟಡಿ ಹತ್ಯೆ ಆರೋಪಿಸಿದ ಕುಟುಂಬ:

ಇಮ್ತಿಯಾಝ್ ಅಹ್ಮದ್ ಕುಟುಂಬ ಪೊಲೀಸರ ಹೇಳಿಕೆಯನ್ನು ಬಲವಾಗಿ ವಿರೋಧಿಸಿದೆ. ಇದು ಕಸ್ಟಡಿಯಲ್ಲಿ ನಡೆದ ಹತ್ಯೆ ಎಂದು ಆರೋಪಿಸಿದೆ.

ಈ ಹಿಂದೆ ಕುಲ್ಗಾಮ್‌ನಿಂದ ನಾಪತ್ತೆಯಾದ ಮೂವರು ಗುಜ್ಜರ್ ಸಮುದಾಯದ ಯುವಕರ ಮೃತದೇಹವನ್ನು ವೈಶೋ ಹೊಳೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು ಈ ಘಟನೆಯು ಹೋಲಿಕೆಯಾಗುತ್ತದೆ ಎಂದು ಕುಟುಂಬವು ಆರೋಪಿಸಿದೆ.

ಈ ಬೆಳವಣಿಗೆ ಜಮ್ಮುಕಾಶ್ಮೀರದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಮತ್ತು ವಿರೋಧ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿವೆ.

ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಈ ಕುರಿತು ಪ್ರತಿಕ್ರಿಯಿಸಿ, ಕುಲ್ಗಾಮ್‌ನ ನದಿಯಿಂದ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಇಮ್ತಿಯಾಝ್‌ ಮಗ್ರೆ ಅವರನ್ನು ಎರಡು ದಿನಗಳ ಹಿಂದೆ ಸೇನೆಯು ವಶಕ್ಕೆ ಪಡೆದುಕೊಂಡಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗ ನಿಗೂಢವಾಗಿ ಅವರ ಮೃತದೇಹ ನದಿಯಲ್ಲಿ ಕಾಣಿಸಿಕೊಂಡಿದೆ. ಈ ಕುರಿತು ನಿಷ್ಪಕ್ಷಪಾತವಾದ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.

ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಅಗಾ ರುಹುಲ್ಲಾ ಮೆಹದಿ ಕೂಡ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕುಲ್ಗಾಮ್‌ನ ಹೊಳೆಯಲ್ಲಿ ಇಮ್ತಿಯಾಝ್‌ ಅಹ್ಮದ್ ಮಗ್ರೆ ಅವರ ಮೃತದೇಹ ಪತ್ತೆಯಾಗಿರುವುದು ತೀವ್ರ ಆತಂಕ ತಂದಿದೆ. ವಿಶ್ವಾಸಾರ್ಹ ವರದಿಗಳ ಪ್ರಕಾರ, ಇಮ್ತಿಯಾಝ್‌ ಅವರನ್ನು ಕೆಲವು ದಿನಗಳ ಹಿಂದೆ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದರು. ಇಂದು ಅವರನ್ನು ನಿರ್ಜೀವವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News