ವಿವಿಧ ರಾಜ್ಯಗಳಲ್ಲಿ ಎಫ್ಐಆರ್ ದಾಖಲು; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯೂಟ್ಯೂಬರ್ ರಣವೀರ್ ಅಲಹಾಬಾದಿಯ
ರಣವೀರ್ ಅಲಹಾಬಾದಿಯ (Photo:X/Ranveer Allahbadia)
ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳನ್ನು ಪ್ರಶ್ನಿಸಿ ‘ಬಿಯರ್ ಬೈಸೆಪ್ಸ್’ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾಮಿಡಿಯನ್ ಸಮಯ್ ರೈನಾ ಆತಿಥ್ಯದ ‘ಇಂಡಿಯಾಸ್ ಗಾಟ್ ಲೇಟೆಂಟ್’ ರಿಯಾಲಿಟಿ ಶೋನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಅವರ ವಿರುದ್ಧ ಎಫ್ಐಆರ್ ಗಳು ದಾಖಲಾಗಿವೆ. ಸದ್ಯ ಈ ವಿಡಿಯೊವನ್ನು ಯೂಟ್ಯೂಬ್ ನಿಂದ ಅಳಿಸಿ ಹಾಕಲಾಗಿದೆ.
ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳನ್ನು ಒಗ್ಗೂಡಿಸಬೇಕು ಎಂದು ಕೋರಿ ತಮ್ಮ ವಕೀಲ ಅಭಿನವ್ ಚಂದ್ರಚೂಡ್ ಮೂಲಕ ರಣವೀರ್ ಅಲಹಾಬಾದಿಯ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಣವೀರ್ ಅಲಹಾಬಾದಿಯ ಹಾಗೂ ಇನ್ನಿತರರಿಗೆ ಈಗಾಗಲೇ ಗುವಾಹಟಿ ಪೊಲೀಸರ ಸಮನ್ಸ್ ಜಾರಿಗೊಳಿಸಿರುವುದರಿಂದ, ಬಂಧನದ ಭೀತಿ ಎದುರಿಸುತ್ತಿರುವ ಅವರು, ನಿರೀಕ್ಷಣಾ ಜಾಮೀನಿಗೂ ಮನವಿ ಮಾಡಿದ್ದಾರೆ.
ಮುಖ್ಯಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಎದುರಿಗೆ ಬಂದಿರುವ ಅರ್ಜಿಯಲ್ಲಿ ವಿಚಾರಣೆಯನ್ನು ಆದಷ್ಟೂ ಶೀಘ್ರವಾಗಿ ನಡೆಸಬೇಕು ಎಂದೂ ಕೋರಲಾಗಿತ್ತು. ಆದರೆ, ಈ ಮನವಿಯನ್ನು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿಗಳು, ಈಗಾಗಲೇ ಪ್ರಕರಣದ ವಿಚಾರಣಾ ದಿನಾಂಕವನ್ನು ನಿಗದಿಗೊಳಿಸಲಾಗಿದೆ ಎಂದು ಹೇಳಿದರು.
ಹೆಚ್ಚಿನ ವಿವರಗಳಿಗೆ ನ್ಯಾಯಾಲಯದ ರಿಜಿಸ್ಟ್ರಾರ್ ಅವರನ್ನು ಭೇಟಿಯಾಗುವಂತೆ ರಣವೀರ್ ಅಲಹಾಬಾದಿಯರ ಕಾನೂನು ತಂಡಕ್ಕೆ ನ್ಯಾ. ಸಂಜೀವ್ ಖನ್ನಾ ಸಲಹೆ ನೀಡಿದರು.